ವೀರಾಜಪೇಟೆ, ಅ. 14: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಮೆಮೊಟ್ಟೆಯ ದಿನಸಿ ಅಂಗಡಿಗಳಲ್ಲಿ ಯಥೇಚ್ಚವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ ಎಂದು ತೆರಮೆಮೊಟ್ಟೆ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಬಿ.ಎಂ. ಹೇಮಲತಾ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೇಮಲತಾ, ಈ ಬಗ್ಗೆ ಇಲಾಖೆಗಳಿಗೆ ಮಾಹಿತಿ ಗೊತ್ತಿದ್ದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮದ ಬಹುತೇಕ ಪುರುಷರು ಹಾಗೂ ಯುವಕರು ಕುಡಿತದ ದಾಸ್ಯಕ್ಕೆ ಬಲಿಯಾಗುತ್ತಿದ್ದಾರೆ. ನಮ್ಮ ಗಂಡಂದಿರನ್ನು ಉಳಿಸಿಕೊಡಿ ಎಂದು ಗ್ರಾಮದ ಪುಷ್ಪಾವತಿ, ಬಿ.ಎಸ್. ಲೀಲಾವತಿ ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಗ್ರಾಮಸ್ಥರ ಮಹಿಳೆಯರ ಪರವಾಗಿ ಯಶೋಧ ಮಾತನಾಡಿ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವದರಿಂದ ಗ್ರಾಮದಲ್ಲಿ ಈ ಮದ್ಯದ ಅಂಗಡಿ ಇರುವ ರಸ್ತೆಯಲ್ಲಿ ಹೆಂಗಸರು ಮಕ್ಕಳು ಮುಕ್ತವಾಗಿ ಓಡಾಡಲು ಕಷ್ಟವಾಗುತ್ತಿದೆ. ಹಲವಾರು ಬಾರಿ ದೂರು ನೀಡಿದರೂ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳದಿರುವದನ್ನು ಗಮನಿಸಿದರೆ ಮಹಿಳೆಯರಿಗೆ ಇದರಿಂದ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು. ಮುಂದಿನ ಏಳು ದಿನಗಳ ಅವಧಿಯಲ್ಲಿ ಗ್ರಾಮವನ್ನು ಮದ್ಯದಿಂದ ಮುಕ್ತಗೊಳಿಸದಿದ್ದರೆ ತಾ. 20 ರಂದು ಗ್ರಾಮದ ಮಹಿಳೆಯರು ಸೇರಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಗ್ರಾಮದ ನೊಂದ ಮಹಿಳೆ ಬಿ.ಕೆ. ಲಕ್ಷ್ಮಿ ತಿಳಿಸಿದರು. ಗೋಷ್ಠಿಯಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರ್, ಗ್ರಾಮದ ಜೆ.ಕೆ. ದೇವಕಿ ಸೇರಿದಂತೆ ಅನೇಕ ಗ್ರಾಮಸ್ಥ ಮಹಿಳೆಯರು ಹಾಜರಿದ್ದರು.