ಮಡಿಕೇರಿ, ಅ.14 : ಯುವ ಸಮೂಹದ ಆಕರ್ಷಣೆಗೆ ಒಳಗಾಗಿರುವ ಸಾಮಾಜಿಕ ಜಾಲತಾಣಗಳ ರಾಕ್ಷಸ ಸ್ವರೂಪ ಕಾಲಕ್ರಮೇಣ ಬದಲಾಗಲಿದ್ದು, ಮುದ್ರಣ ಮಾಧ್ಯಮವಾಗಿರುವ ಪತ್ರಿಕೆಗಳೇ ಶಾಶ್ವತ ನೆಲೆಯನ್ನು ಕಂಡುಕೊಳ್ಳುವ ಶಕ್ತಿಯನ್ನು ಪಡೆಯಲಿವೆ ಎಂದು ರಾಜ್ಯದ ಹಿರಿಯ ಪತ್ರಕರ್ತ ಅನಂತ ಚಿನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ವತಿಯಿಂದ ನಡೆದ ಪತ್ರಿಕಾ ಭವನದ 16 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ “ಪತ್ರಿಕೋದ್ಯಮದ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವ” ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಸಾಮಾಜಿಕ ಜಾಲ ತಾಣಗಳು ಸಾಮಾಜಿಕ ಬದುಕು ಮತ್ತು ದೃಶ್ಯ ಮಾಧ್ಯಮಗಳ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ವಿವರಿಸಿದರು.

ಸಾಮಾನ್ಯ ಜನರ ಧ್ವನಿಗೆ ವೇದಿಕೆಯಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅವೈಜ್ಞಾನಿಕ ಮತ್ತು ಸಾಮಾನ್ಯ ಜ್ಞಾನವಿಲ್ಲದ ವಿಚಾರಗಳು ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಗಳಾಗಿ ಮಾರ್ಪಡುತ್ತಿರುವದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಜಾಲತಾಣಗಳ ವಿಚಾರಗಳನ್ನು ವಿವೇಚನೆ ಇಲ್ಲದೆ ಬಳಸಿಕೊಳ್ಳುವ ರೀತಿಯನ್ನು ಜರ್ನಲಿಸಂ ಎಂದು ಹೇಳಲು ಸಾಧ್ಯವಿಲ್ಲ. ತಪ್ಪಾಗಿ ಸುದ್ದಿಗಳನ್ನು ಪ್ರಕಟಿಸಿದ್ದೇವೆ ಎಂದು ತಿಳಿದ ನಂತರವೂ ತಪ್ಪಾಗಿದೆ ಎಂದು ಸ್ಪಷ್ಟೀಕರಣ ನೀಡುವ ಕಾಳಜಿಯನ್ನು ದೃಶ್ಯ ಮಾಧ್ಯಮಗಳು ತೋರುವದಿಲ್ಲ. ಸಾಮಾಜಿಕ ಜಾಲತಾಣದ ಧ್ವನಿಯನ್ನೇ ಎಲ್ಲರ ಧ್ವನಿ ಎಂದು ಪರಿಗಣಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವದಿಲ್ಲ. ಇಂದು ಪ್ರತಿಯೊಬ್ಬರೂ ವರದಿಗಾರ ರಾಗುತ್ತಿದ್ದು, ಅಪರಾಧಗಳನ್ನು ತಡೆಯುವ ಧೈರ್ಯಕ್ಕಿಂತ ತಮ್ಮ ತಮ್ಮ ಮೊಬೈಲ್‍ಗಳಲ್ಲಿ ಸಾಕ್ಷೀಕರಿಸಿಕೊಳ್ಳುವ ಧೈರ್ಯವನ್ನು ತೋರುತ್ತಿದ್ದಾರೆ. ಸಾಮಾಜಿಕ ಜಾಲತಾಣ ಎನ್ನುವದು ಭಯಾನಕ ಸಂಚಲನವೆಂದು ವ್ಯಾಖ್ಯಾನಿಸಿದ ಅನಂತ ಚಿನಿವಾರ, ಇಂದಿನ ಒತ್ತಡದ ಪರಿಸ್ಥಿತಿಯಲ್ಲಿ ಸುದ್ದಿಗಳ ನೈಜತೆಯನ್ನು ಖಾತ್ರಿ ಪಡಿಸಿಕೊಂಡು ಪ್ರಸಾರ ಮಾಡುವ ಅವಕಾಶ ದೃಶ್ಯ

(ಮೊದಲ ಪುಟದಿಂದ) ಮಾಧ್ಯಮಗಳಲ್ಲಿ ಇಲ್ಲದಾಗಿದೆ ಎಂದು ವಿಷಾದಿಸಿದರು.

ಸಾರ್ವಜನಿಕ ಅಭಿಪ್ರಾಯಗಳೇ ಸುದ್ದಿಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪತ್ರಿಕಾ ಧರ್ಮವನ್ನು ಕಾಪಾಡುವ ಅನಿವಾರ್ಯತೆಯಿದ್ದು, ಸಾಮಾಜಿಕ ಜಾಲತಾಣಗಳೊಂದಿಗೆ ಜವಾಬ್ದಾರಿಯುತ ಅಂತರವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಮುಂದಿನ ಐದು ವರ್ಷಗಳಲ್ಲಿ ದೃಶ್ಯ ಮಾಧ್ಯಮಗಳು ಕೂಡ ಸಾಮಾಜಿಕ ಜಾಲತಾಣದ ಸಾಲಿಗೆ ಸೇರಲಿದ್ದು, ಟಿವಿ ಗಳ ಮುಂದೆ ಕುಳಿತು ಸುದ್ದಿ ನೋಡುವ ಆಸಕ್ತಿ ಕಡಿಮೆಯಾಗಲಿದೆ. ಟ್ವಿಟರ್ ಹಾಗೂ ಫೇಸ್‍ಬುಕ್‍ಗಳಿಂದ ಆಕರ್ಷಿತರಾಗಿರುವ ಯುವ ಸಮೂಹ ಕ್ರಮೇಣ ಇವುಗಳ ವ್ಯಾಮೋಹದಿಂದಲೂ ಹೊರ ಬರಲಿದ್ದು, ಅತ್ಯಂತ ಸುಖ ನೀಡುವ ಮುದ್ರಣ ಮಾಧ್ಯಮವಾದ ಪತ್ರಿಕೆಯನ್ನೇ ಅವಲಂಬಿಸಲಿದ್ದಾರೆ ಎಂದು ಅನಂತ ಚಿನಿವಾರ ಭವಿಷ್ಯ ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಕೀಲ ಎಂ.ಎ. ನಿರಂಜನ್, ಆಧುನಿಕ ತಂತ್ರಜ್ಞಾನಗಳು ಮಾನವನ ಬೆಳವಣಿಗೆಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ಆದರೆ ಇಂದು ಸಾಮಾಜಿಕ ಜಾಲತಾಣಗಳು ಮಾನವ ಸಂಬಂಧಗಳನ್ನು ದೂರ ಮಾಡುತ್ತಿವೆ ಮತ್ತು ಭಾಷೆಯ ಮೇಲಿನ ಹಿಡಿತವನ್ನು ಕಳೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ವ್ಯಾಟ್ಸ್‍ಅಪ್‍ನಲ್ಲಿ ಬರುವ ಸಂದೇಶಗಳೇ ಸುದ್ದಿಗಳಾಗುವ ದನ್ನು ತಪ್ಪಿಸಬೇಕಾಗಿದೆ. ಪತ್ರಕರ್ತರಿಗೆ ಬರೆಯಲು ಮುಕ್ತ ಅವಕಾಶಗಳಿದ್ದರೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳು ಮಾಧ್ಯಮ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಅಭಿಪ್ರಾಯಪಟ್ಟ ನಿರಂಜನ್ ಅತಿಯಾದರೆ ಅಮೃತವೂ ವಿಷವಾಗಲಿದೆ ಎಂದರು. ಸತ್ಯ ಮತ್ತು ನಿಷ್ಠೆಯ ವರದಿಗಳನ್ನು ಪ್ರಕಟಿಸುವ ಮೂಲಕ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳು ಮಾನನಷ್ಟ ಮೊಕದ್ದಮೆಗಳ ಭೀತಿಯಿಂದ ಮುಕ್ತರಾಗಬಹುದೆಂದು ನಿರಂಜನ್ ಸಲಹೆ ನೀಡಿದರು.

ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಮನುಶೆಣೈ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ.ಬಿ.ಮಹಂತೇಶ್, ಟ್ರಸ್ಟಿ ಟಿ.ಪಿ.ರಮೇಶ್, ಮಾಜಿ ಸಚಿವ ಎಂ.ಸಿ.ನಾಣಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಕೋಶಾಧಿಕಾರಿ ಎಂ.ಪಿ. ಕೇಶವಕಾಮತ್ ನಿರೂಪಿಸಿ, ಸ್ವಾಗತಿಸಿದರು. ಅನಿಲ್ ಹೆಚ್.ಟಿ. ವಂದಿಸಿದರು.