ಮಡಿಕೇರಿ, ಅ. 13: ಮಡಿಕೇರಿ, ವೀರಾಜಪೇಟೆ ಹಾಗೂ ಗೋಣಿಕೊಪ್ಪ ನಗರಗಳಲ್ಲಿ ಇತ್ತೀಚೆಗೆ ಮನೆಯ ಬಾಗಿಲು ಒಡೆದು ಕಳವು ಮಾಡುತ್ತಿದ್ದ ಆರೋಪಿತರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲೆಯ ಅಪರಾಧ ಪತ್ತೆ ದಳದ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ತಾ. 16.7.2017 ರಂದು ಗೋಣಿಕೊಪ್ಪ ಮುಖ್ಯರಸ್ತೆಯಲ್ಲಿರುವ ಪುಷ್ಪಾವತಿ ಎಂಬವರ ಮನೆ ಕಳುವಾದ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ಆರೋಪಿತರು ಸುಮಾರು 164 ಗ್ರಾಂ. ಚಿನ್ನ ಹಾಗೂ 15 ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಜು ತನಿಖೆ ನಡೆಸುತ್ತಿದ್ದರು. ಈ ಪ್ರಕರಣವಾಗಿ ಸುಮಾರು 12 ದಿನಗಳ ನಂತರ ತಾ. 28.7.2017 ರಂದು ಮಡಿಕೇರಿ ನಗರದ ಜಯನಗರ ನಿವಾಸಿ ಕಾರ್ಯಪ್ಪ

(ಮೊದಲ ಪುಟದಿಂದ) ಎಂಬವರ ಮನೆಯ ಬಾಗಿಲು ಮುರಿದು ಕಳವು ಮಾಡಿ ಆರೋಪಿತರು ಸುಮಾರು 256 ಗ್ರಾಂ. ಚಿನ್ನ ಹಾಗೂ 5 ಸಾವಿರ ನಗದು ಹಣ ಸೇರಿದಂತೆ .22 ರಿವಾಲ್ವರ್ ಹಾಗೂ ಮೂರು ಗುಂಡುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಸದರಿ ರಿವಾಲ್ವರನ್ನು ಬಳಸಿ ಆರೋಪಿತರು ಇನ್ನಷ್ಟು ಕೃತ್ಯಗಳನ್ನು ಎಸಗುವ ಸಾಧ್ಯತೆಯಿದ್ದ ಕಾರಣ ಸದರಿ ಪ್ರಕರಣವನ್ನು ಪತ್ತೆ ಮಾಡುವ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು, ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ಎಂ. ಮಹೇಶ್ ಹಾಗೂ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿದ್ದಾಗಿ ಅವರು ಮಾಹಿತಿ ನೀಡಿದರು.

ಕಳವು ಪ್ರಕರಣದ ಆರೋಪಿತರನ್ನು ಪತ್ತೆ ಮಾಡುವಲ್ಲಿ ಎರಡೂ ತಂಡಗಳು ಮಾಹಿತಿ ಸಂಗ್ರಹಿಸುತ್ತಿರುವಾಗಲೇ ತಾ. 28.9.2017 ರಂದು ಮಡಿಕೇರಿ ನಗರದ ರೈಫಲ್ ರೇಂಜ್‍ನ ಎನ್.ಯು. ಗೌತಮ್ ಎಂಬವರ ಮನೆಯ ಬಾಗಿಲು ಮುರಿದು 72 ಗ್ರಾಂ. ಚಿನ್ನಾಭರಣ ಹಾಗೂ ಒಂದು ಎಸ್‍ಬಿಬಿಎಲ್ ಕೋವಿಯನ್ನು ಕಳವು ಮಾಡಿದ್ದು, ಈ ಬಗ್ಗೆ ಮಡಿಕೇರಿ ನಗರದಲ್ಲಿ ಪ್ರಕರಣ ದಾಖಲಾಗಿತ್ತು.

ಮಡಿಕೇರಿ ನಗರದಲ್ಲಿ ನಡೆದ ಎರಡೂ ಪ್ರಕರಣಗಳಲ್ಲಿ ಆರೋಪಿತರು ರಿವಾಲ್ವರ್ ಹಾಗೂ ಬಂದೂಕನ್ನು ಕಳವು ಮಾಡಿದ್ದರಿಂದ ಇನ್ನಷ್ಟು ಅಪರಾಧಗಳನ್ನು ಎಸಗುವ ಶಂಕೆಯೊಂದಿಗೆ ಎರಡು ತಂಡಗಳಿಗೆ ಎಸ್‍ಪಿ ತುರ್ತು ಕಾರ್ಯಾಚರಣೆಗೆ ನಿರ್ದೇಶಿಸಿದ್ದರು. ಆ ಮೇರೆಗೆ ಕರ್ತವ್ಯ ನಿರತರಾದ ಅಪರಾಧ ಪತ್ತೆ ದಳದ ಪೊಲೀಸರು ಹಿಂದೆ ಮನೆ ಕಳವು ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಅಸಾಮಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಪ್ರಕರಣದ ಓರ್ವ ಆರೋಪಿ ಸಲೀಂನನ್ನು ಸೋಮವಾರಪೇಟೆಯಲ್ಲಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆಯ ವೇಳೆ ಆರೋಪಿಯು ತನ್ನ ಸಹಚರರಾದ ಗರಗಂದೂರು ಗ್ರಾಮದ ಶರತ್ ಹಾಗೂ ಸೋಮವಾರಪೇಟೆಯ ಅನಿಲ್ ಎಂಬವರ ಬಗ್ಗೆ ಸುಳಿವು ನೀಡಿರುತ್ತಾನೆ. ಆತನ ಮಾಹಿತಿಯನ್ನಾಧರಿಸಿ ಶರತ್ ಹಾಗೂ ಅನಿಲ್ ಇಬ್ಬರನ್ನು ಗರಗಂದೂರು ಹಾಗೂ ಸುಂಟಿಕೊಪ್ಪದಲ್ಲಿ ವಶಕ್ಕೆ ಪಡೆದ ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಮೂವರು ಆರೋಪಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಸಲೀಂ, ಶರತ್ ಹಾಗೂ ಅನಿಲ್ ಗೋಣಿಕೊಪ್ಪ ನಗರದಲ್ಲಿ ಒಂದು ಹಾಗೂ ಮಡಿಕೇರಿ ನಗರದಲ್ಲಿ ಎರಡು ಕಳವು ಮಾಡಿದ್ದು, ಸದರಿ ಕಳವು ಮಾಡಲು ಆಯುಧಗಳನ್ನು ಆರೋಪಿ ಅನಿಲ್‍ನು ಒದಗಿಸುತ್ತಿದ್ದನೆಂದು ಹಾಗೂ ಕಳವು ಮಾಡಿದ ಸ್ವತ್ತುಗಳನ್ನು ಶರತ್ ಹಾಗೂ ಅನಿಲ್ ಸೇರಿ ಸುಂಟಿಕೊಪ್ಪ ಹಾಗೂ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಂಬೂರ್‍ನಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಎಲ್ಲರೂ ಸೇರಿ ಹಂಚಿಕೊಳ್ಳುತ್ತಿದ್ದರೆಂದೂ ತಪ್ಪೊಪ್ಪಿಕೊಂಡಿದ್ದಾರೆ.

ಅಲ್ಲದೆ ಆರೋಪಿ ಸಲೀಂ ತನ್ನ ಮತ್ತೊಬ್ಬ ಸಹಚರ ಸವಿನ್ ಎಂಬಾತನೊಂದಿಗೆ ಸೇರಿ ತಾ. 3.7.2017 ರಂದು ವೀರಾಜಪೇಟೆಯ ಅರಮೇರಿ ಗ್ರಾಮದ ಅನುಸೂಯ ಎಂಬವರ ಮನೆಯ ಬಾಗಿಲು ಮುರಿದು 70 ಸಾವಿರ ನಗದು ಹಾಗೂ 32 ಗ್ರಾಂ. ಚಿನ್ನಾಭರಣವನ್ನು ಕಳವು ಮಾಡಿದ್ದು ಬೆಳಕಿಗೆ ಬಂದಿದೆ. ಸದರಿ ಚಿನ್ನಾಭರಣಗಳು ಸವಿನ್‍ನ ಬಳಿ ಇರುವದಾಗಿ ಒಪ್ಪಿಕೊಂಡಿರುತ್ತಾನೆ.

ಬಂಧಿತ ಆರೋಪಿಗಳ ಹಿನ್ನೆಲೆ

ಒಂದನೇ ಆರೋಪಿ ಸಲೀಂ (32) ಸೋಮವಾರಪೇಟೆ ಗಾಂಧಿನಗರ ನಿವಾಸಿ, ಮೊೈದು ಎಂಬವರ ಮಗನಾಗಿದ್ದು, ಸ್ವಂತ ವಿಳಾಸ: ಉಲಿಕ್ಕಲ್ ಗ್ರಾಮ, ಇರಿಟ್ಟಿ ತಾಲೂಕು, ಕೇರಳ ಮೂಲದವನಾಗಿದ್ದಾನೆ. ಎರಡನೇ ಆರೋಪಿ ಶರನ್ (25) ಗರಗಂದೂರು ಗ್ರಾಮದ ಕೃಷ್ಣ ಎಂಬವರ ಪುತ್ರನಾಗಿದ್ದಾನೆ. ಮೂರನೇ ಆರೋಪಿ ಅನಿಲ್ ಕುಮಾರ್ (43) ಕೂಡ ಸೋಮವಾರಪೇಟೆ ಗಾಂಧಿನಗರದ ಕೃಷ್ಣ ಎಂಬವರ ಪುತ್ರನಾಗಿದ್ದಾನೆ.

1ನೇ ಆರೋಪಿ ಸಲೀಂ 2008 ರಿಂದ ಇಲ್ಲಿಯವರೆಗೆ ಸುಮಾರು 7 ಪ್ರಕರಣಗಳಲ್ಲಿ (ಇರಿಟ್ಟಿಯಲ್ಲಿ -4, ವೀರಾಜಪೇಟೆ -3) ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಒಂದು ಪ್ರಕರಣದಲ್ಲಿ 4 ವರ್ಷ ಶಿಕ್ಷೆಯನ್ನು ಅನುಭವಿಸಿರುತ್ತಾನೆ. ಈತನ ವಿರುದ್ಧ ವೀರಾಜಪೇಟೆ ಪೊಲೀಸ್ ಠಾಣೆಯ ಮೂರು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾಗಿರುತ್ತದೆ. ಇನ್ನಿಬ್ಬರು ಆರೋಪಿಗಳು ಮೊದಲ ಬಾರಿಗೆ ದುಷ್ಕøತ್ಯದಲ್ಲಿ ಭಾಗಿಯಾಗಿದ್ದಾರೆ. ಗೋಣಿಕೊಪ್ಪ, ಮಡಿಕೇರಿಯಲ್ಲಿ ನಡೆದ ಒಟ್ಟು 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ ಒಂದು .22 ರಿವಾಲ್ವರ್, 3 ಸಜೀವ ಗುಂಡುಗಳು, ಒಂದು ಎಸ್‍ಬಿಬಿಎಲ್ ಬಂದೂಕು, 492 ಗ್ರಾಂ. ಚಿನ್ನಾಭರಣ ಸುಮಾರು ರೂ. 13,67,000 ಮೌಲ್ಯದ್ದಾಗಿದೆ. ಒಂದು ದ್ವಿ ಚಕ್ರ್ರ ವಾಹನ, ಒಂದು ಕಾರು ಹಾಗೂ ಕಳವು ಮಾಡಿದ ನಗದು ಹಣದಿಂದ ಖರೀದಿಸಿದ 1 ದ್ವಿಚಕ್ರ ವಾಹನ ಸಹಿತ ಒಟ್ಟು ಸುಮಾರು ರೂ. 18 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಹಾಗೂ ಮಡಿಕೇರಿ ಉಪಾದೀಕ್ಷಕ ಕೆ.ಎಸ್. ಸುಂದರ್ ರಾಜ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಎಂ. ಮಹೇಶ್ ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ ನೇತೃತ್ವದಲ್ಲಿ ಎಎಸ್‍ಐ ಕೆ.ವೈ. ಹಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿಗಳಾದ ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್‍ಕುಮಾರ್, ಎಂ.ಎನ್. ನಿರಂಜನ್, ಬಿ.ಎಲ್. ಯೋಗೇಶ್‍ಕುಮಾರ್, ಕೆ.ಆರ್. ವಸಂತ, ಸಜಿ, ಸುರೇಶ್ ಹಾಗೂ ಚಾಲಕರಾದ ಕೆ.ಎಸ್. ಶಶಿಕುಮಾರ್, ಬಿ.ಸಿ. ಶೇಷಪ್ಪ ಕಾರ್ಯಾಚರಣೆಯೊಂದಿಗೆ ಭೇದಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.