ಸೋಮವಾರಪೇಟೆ, ಅ.14: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆಂಜನೇಯ ದೇವಸ್ಥಾನದ ಸನಿಹವಿರುವ ಕಾನ್ವೆಂಟ್ ಬಾಣೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನೂತನವಾಗಿ ಮದ್ಯದಂಗಡಿ ತೆರೆಯಲಾಗಿದ್ದು, ಇದನ್ನು ತಕ್ಷಣ ಮುಚ್ಚುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಕಾನ್ವೆಂಟ್ಬಾಣೆಯ ದೇವಾಲಯ ದಲ್ಲಿ ಸಭೆ ಸೇರಿ ಮದ್ಯದಂಗಡಿ ಯವರೆಗೂ ಪ್ರತಿಭಟನಾ ಸಭೆ ನಡೆಸಿದ ಗ್ರಾಮಸ್ಥರು, ಮದ್ಯದಂಗಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜನವಸತಿ ಪ್ರದೇಶದಲ್ಲಿ ಬಾರ್ ತೆರೆಯಲು ಅನುಮತಿ ನೀಡಿರುವ ಅಬಕಾರಿ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು.
ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜ ರವಿ ಮತ್ತು ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ್, ಹಾನಗಲ್ಲು ಗ್ರಾ.ಪಂ. ಉಪಾಧ್ಯಕ್ಷ ಮಿಥುನ್, ಚೌಡ್ಲು ಗ್ರಾ.ಪಂ. ಸದಸ್ಯ ದೇವಿಪ್ರಸಾದ್ ಸೇರಿದಂತೆ ಗ್ರಾಮಸ್ಥರು ಮದ್ಯದಂಗಡಿ ಮುಚ್ಚುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟುಹಿಡಿದ ಪ್ರತಿಭಟನಾಕಾರರು ಧರಣಿಗೆ ಕುಳಿತ ಸಂದರ್ಭ, ಸೋಮವಾರಪೇಟೆ ಅಬಕಾರಿ ಇಲಾಖೆಯ ಉಪ ನಿರೀಕ್ಷಕ ಜಿ.ಆರ್. ಗಣೇಶ್ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಗ್ರಾಮಸ್ಥರು ಅಧಿಕಾರಿ ಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಮದ್ಯದಂಗಡಿ ತೆರೆಯಲೇ ಬೇಕೆಂದಾದರೆ ನಿಮ್ಮ ಕಚೇರಿ ಅಥವಾ ಮನೆಯ ಬಳಿ ಅವಕಾಶ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಗಣೇಶ್ ಅವರು, ಶಾಲಾ ಕಾಲೇಜು, ದೇವಸ್ಥಾನದಿಂದ 100 ಮೀಟರ್ ಅಂತರದಲ್ಲಿ
(ಮೊದಲ ಪುಟದಿಂದ) ಮದ್ಯದಂಗಡಿಗೆ ಅವಕಾಶವಿಲ್ಲ ಎಂದು ಕಾನೂನಿನಲ್ಲಿದೆ. ಇದು ಸರ್ಕಾರದ ಮದ್ಯದಂಗಡಿ ಎಂದಾಗ, ಗದ್ದಲ ಎಬ್ಬಿಸಿದ ಪ್ರತಿಭಟನಾಕಾರರು, ಸ್ಥಳೀಯರೇ ವಿರೋಧ ವ್ಯಕ್ತಪಡಿಸುತ್ತಿರುವಾಗ ಮದ್ಯದಂಗಡಿಗೆ ಅವಕಾಶ ನೀಡಿದ್ದು ಯಾಕೆ? ಎಂದು ಅಸಮಾಧಾನಗೊಂಡರು.
ನಂತರ ಇಲಾಖೆಯ ಹಿರಿಯ ಅಧಿಕಾರಿಯೊಂದಿಗೆ ದೂರವಾಣಿ ಮೂಲಕ ವಾಸ್ತವಾಂಶವನ್ನು ವಿವರಿಸಿದ ಅಬಕಾರಿ ಉಪ ನಿರೀಕ್ಷಕ ಗಣೇಶ್ ಅವರು, ಸದ್ಯಕ್ಕೆ ಮದ್ಯ ದಂಗಡಿಗೆ ಬೀಗ ಹಾಕಲಾಗುವದು. ಈ ಬಗ್ಗೆ ಇಲಾಖೆಯ ಜಿಲ್ಲಾಧಿಕಾರಿ ಮತ್ತು ಆಯುಕ್ತರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರಲ್ಲದೇ, ಇಲಾಖೆ ವತಿಯಿಂದಲೇ ಅಂಗಡಿಗೆ ಬೀಗ ಜಡಿದರು.
ಕಳೆದ ಜೂನ್ 24ರಂದೇ ಮದ್ಯದಂಗಡಿಗೆ ವಿರೋಧಿಸಿ ಜಿಲ್ಲಾಧಿಕಾರಿಗಳು, ಅಬಕಾರಿ ಆಯುಕ್ತರಿಗೆ ಕಾನ್ವೆಂಟ್ ಬಾಣೆ ಗ್ರಾಮಸ್ಥರು, ಓಎಲ್ವಿ ಶಾಲೆ, ಜ್ಞಾನವಿಕಾಸ ಶಾಲೆಯ ಮೂಲಕ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಗ್ರಾಮ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಸಹ ತಾ. 04.10.2017ರಂದು ಸಿಎಲ್ 11 ಸಿ ಅಡಿಯಲ್ಲಿ ಮದ್ಯದಂಗಡಿಗೆ ಪರವಾನಗಿ ಕೊಡಲಾಗಿದೆ. ಇದು ಖಂಡನೀಯ ಎಂದು ಗ್ರಾಮಸ್ಥರಾದ ಹಸನಬ್ಬ, ಸುರೇಶ್, ಗಣೇಶ್, ವಿಶ್ವನಾಥ್, ಕೊರಗಪ್ಪ, ಅಜೀಜ್ ಸೇರಿದಂತೆ ಇತರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಬಗ್ಗೆ ನಿನ್ನೆ ದಿನ ಮನೆ ಮನೆಗೆ ತೆರಳಿ ಮಾಹಿತಿ ನೀಡುವ ಸಂದರ್ಭ ಕ್ಷೇತ್ರದ ಶಾಸಕರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಗ್ರಾಮಸ್ಥರಾದ ಮುರುಳಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ಎಂಎಸ್ಐಎಲ್ ಸರ್ಕಾರದ ಅಂಗಸಂಸ್ಥೆಯಾಗಿದ್ದು, ಸರ್ಕಾರವೇ ಅನುಮತಿ ನೀಡಿದೆ. ಶಾಸಕರು ಆಡಳಿತ ಪಕ್ಷದ ಸದಸ್ಯರಲ್ಲ. ಆದರೂ ಶಾಸಕರ ಬಗ್ಗೆ ಜನರಿಗೆ ತಪ್ಪು ಕಲ್ಪನೆ ಮೂಡು ವಂತೆ ಮಾಹಿತಿ ನೀಡುತ್ತಿರುವದು ಸರಿಯಲ್ಲ. ಇದರಲ್ಲಿ ರಾಜಕೀಯ ಬೇಡ. ನಾವುಗಳೂ ಸಹ ಬಾರ್ನ ವಿರುದ್ಧವಿದ್ದೇವೆ ಎಂದು ವಾದಿಸಿದರು. ಈ ಸಂದರ್ಭ ಕೆಲಕಾಲ ಪ್ರತಿಭಟನಾಕಾರರ ನಡುವೆಯೇ ವಾಗ್ವಾದ ನಡೆಯಿತು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಠಾಣಾಧಿಕಾರಿ ಎಂ.ಶಿವಣ್ಣ, ಎಎಸ್ಐ ಸಣ್ಣಪ್ಪ, ಪುಟ್ಟಪ್ಪ ಸೇರಿದಂತೆ ಸಿಬ್ಬಂದಿಗಳು ಸಮಾಧಾನಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಸಿ.ಸಿ. ನಂದ, ನತೀಶ್ ಮಂದಣ್ಣ, ಗಿರೀಶ್, ಹಾನಗಲ್ಲು ಗ್ರಾ.ಪಂ. ಸದಸ್ಯ ಶಿವಪ್ಪ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಸೇರಿದಂತೆ ಗ್ರಾಮಸ್ಥರು, ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿದ್ದರು.