*ಗೋಣಿಕೊಪ್ಪಲು, ಅ. 14: ಹಾತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲನಡೆದ ವನವಾಸಿ ಕರ್ನಾಟಕದ ರಾಜ್ಯಮಟ್ಟದ ವನವಾಸಿ ಕ್ರೀಡಾ ಕೂಟ ಶನಿವಾರ ಮುಕ್ತಾಯವಾಯಿತು.

ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದ ಕ್ರೀಡಾ ಪಟುಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ.ಜಡೆಯಗೌಡ ಮಾತನಾಡಿ, ಅರಣ್ಯದಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಹಲವು ಪ್ರತಿಭೆಗಳಿವೆ. ಅವರಿಗೆ ಸೂಕ್ತ ಸೌಲಭ್ಯ ಲಭಿಸಿದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರಲಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜಾ ಮಾತನಾಡಿ ಗಿರಿಜನರ ಪಾರಂಪರಿಕ ಹಕ್ಕಾದ ಅರಣ್ಯದಲ್ಲಿ ವಾಸಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವದರಿಂದ ತಮ್ಮದೇ ಆದ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಜಿಲ್ಲಾ ಸದಸ್ಯ ಸಿ.ಕೆ.ಬೋಪಣ್ಣ, ವನವಾಸಿಗಳ ಸಂಸ್ಕøತಿ ಶ್ರೀಮಂತವಾಗಿದೆ. ಯಾವದೇ ಕಾರಣಕ್ಕೂ ಇದಕ್ಕೆ ಬೆನ್ನುಮಾಡಬಾರದು ಎಂದರು. ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಕಾರ್ಮಾಡು ಗ್ರಾಮದ ವನವಾಸಿ ಮುಖಂಡ ಗಾಂಡಂಗಡ ಬೋಪಯ್ಯ, ತಿತಿಮತಿಯ ಎನ್.ಎನ್. ಅನೂಪ್, ಕಾರ್ಮಾಡು ಗ್ರಾಮದ ಪಿ.ಎ. ಪ್ರಭುಕುಮಾರ್ ಇದ್ದರು.