ಸುಂಟಿಕೊಪ್ಪ, ಅ. 13: ಅಕ್ರಮ ಗಣಿಗಾರಿಕೆ ತಡೆಯಿರಿ, ಚರಂಡಿ ಕಾಮಗಾರಿಯನ್ನು ಮಾಡಿ, ಉಳಿದ ಉಪ್ಪುತೋಡು-ಕಂಬಿಬಾಣೆ ರಸ್ತೆ ಕಾಮಗಾರಿ ಮುಂದುವರೆಸಿ, ಮಾತೃ ಪೂರ್ಣ ಯೋಜನೆಯು ಸಮರ್ಪಕ ವಾಗಿ ನಡೆಯುತ್ತಿಲ್ಲ. ನಿರಂತರ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳು ಪ್ರಸ್ತಾಪಗೊಂಡವು.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ 2017-18ನೇ ಸಾಲಿನ ಗ್ರಾಮಸಭೆಯು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಅಧ್ಯಕ್ಷ ಹೆಚ್.ಇ. ಅಬ್ಬಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಡಗರaಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರುವಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಈ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಈ ಅಕ್ರಮ ಗಣಿಗಾರಿಕೆಯ ಬಗ್ಗೆ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಿಸುವದಕ್ಕೆ ಹೋದರೆ ಈ ಹಿಂದೆ ಇದ್ದ ಪಿಎಸ್‍ಐ ಅವರು ಅದನ್ನು ತಿರಸ್ಕಾರಿಸಿ, ನಮ್ಮ ಮೇಲೆಯೇ ಕೇಸು ದಾಖಲಿಸಿದ್ದಾರೆ. ಇದನ್ನು ತಡೆಗಟ್ಟಲು ಸಾದ್ಯವಿಲ್ಲವೇ ಎಂದು ಗ್ರಾಮಸ್ಥ ನಾಣಯ್ಯ ಮತ್ತು ಮಾಜಿ ಗ್ರಾ.ಪಂ. ಅಧ್ಯಕ್ಷ ಕ್ಲೈವಾ ಪೊನ್ನಪ್ಪ, ಗ್ರಾಮಸ್ಥರು ಅಧ್ಯಕ್ಷರನ್ನು ಪ್ರಶ್ನಿಸಿದರು.
ಈ ಬಗ್ಗೆ ಉತ್ತರಿಸಿದ ಅಧ್ಯಕ್ಷ ಅಬ್ಬಾಸ್ ಇದು ರಾಜ್ಯ ಮಟ್ಟದ ಪ್ರಭಾವವನ್ನು ಬಳಸಿಕೊಂಡು ಈ ರೀತಿಯ ಅಕ್ರಮ ಗಣಿಗಾರಿಕೆ ನಡೆಯುತ್ತಿರುವದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೇ ಕಾನೂನು ಕ್ರಮ ಕೈಗೊಳ್ಳಬೇಕು. ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವದು ಎಂದರು. ಒಂದು ವೇಳೆ ಪೊಲೀಸರು ನಮಗೆ ತೊಂದರೆ ಉಂಟುಮಾಡಿದರೆ ಗ್ರಾಮಸ್ಥರ ಜೊತೆಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪೊನ್ನಪ್ಪ ಎಚ್ಚರಿಕೆ ನೀಡಿದರು.
ಈ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಸುಂಟಿಕೊಪ್ಪ ಸೆಸ್ಕ್ ಕಿರಿಯ ಅಭಿಯಂತರರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮಾತನಾಡಿದ ಜೆಇ ರಮೇಶ್, ಈಗಾಗಲೇ ಕೊಡಗರಹಳ್ಳಿಯ ಸ್ಕೂಲ್ ಬಾಣೆಯಲ್ಲಿ ಟ್ರಾನ್ಸ್‍ಫಾರ್ಮರ್ ಅಳವಡಿಸುವದಕ್ಕೆ ಒಪ್ಪಿಗೆ ಸಿಕ್ಕಿದೆ. ಆದಷ್ಟು ಬೇಗನೇ 63 ಕೆ.ವಿ. ವಿದ್ಯುತ್ ಸಂಪರ್ಕವನ್ನು ಈ ಭಾಗದಲ್ಲಿ ಕೊಡಲಾಗುವದು. ಕಲ್ಲೂರು, ಕಲ್ಲುಕೊರೆ ಭಾಗದಲ್ಲಿ 32 ಕಂಬಗಳ ಅವಶ್ಯಕತೆಯಿದ್ದು, ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಗೊಳಿಸ ಬೇಕಾಗಿದೆ ಎಂದು ಮಾಹಿತಿ ನೀಡಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕೊಡಗರಹಳ್ಳಿ-ಉಪ್ಪುತೋಡು ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆದಿದ್ದು, ಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ ಎಂದು ಗ್ರಾಮಸ್ಥರಾದ ರಾದಾಕೃಷ್ಣ ಮತ್ತು ಸುಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಅಬ್ಬಾಸ್, ಇಂಜಿನಿಯರ್ ಅವರನ್ನು ಸಭೆಗೆ ಬರಲು ತಿಳಿಸಿದ್ದೆ ಆದರೆ ಅವರು ಗೈರುಹಾಜರಾಗಿದ್ದಾರೆ. ಗ್ರಾ.ಪಂ.ಗೆ ಇದು ಸಂಬಂಧ ಪಡುವದಿಲ್ಲ. ರಸ್ತೆ ಕಾಮಗಾರಿ ಮಾಡಿದ ಮೇಲೆ ಸ್ವಚ್ಛಗೊಳಿಸುವ ಕಾರ್ಯವು ಅವರಿಗೆ ಸೇರಿದ್ದು, ಅವರಿಗೆ ಕೂಡಲೇ ಚರಂಡಿ ಕೆಲಸ ಮಾಡುವದಕ್ಕೆ ತಿಳಿಸುವದಾಗಿ ಹೇಳಿದರು. ಕಾವೇರಿ ಬಡಾವಣೆಯಲ್ಲಿ ರಸ್ತೆ ಸೇರಿದಂತೆ ಯಾವದೇ ಅಭಿವೃದ್ಧಿ ಕಾರ್ಯವನ್ನು ಯಾವ ಕಾರಣಕ್ಕಾಗಿ ಮಾಡುತ್ತಿಲ್ಲ ಎಂದು ಆ ಭಾಗದ ಗ್ರಾಮಸ್ಥರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಾಗ, ಆಕ್ರೋಶಗೊಂಡ ಅಧ್ಯಕ್ಷರು ಈಗಾಗಲೇ ಗ್ರಾ.ಪಂ. ಅನುದಾನದಲ್ಲಿ ಆ ಭಾಗಕ್ಕೆ ಬೇಕಾದ ನೀರು, ವಿದ್ಯುತ್ ಸೌಲಭ್ಯಗಳ ಕಾಮಗಾರಿ ಕೈಗೊಂಡಾಗ ಕೆಲವರು ಅದನ್ನು ವಿರೋಧಿಸುತ್ತಿರುವದರಿಂದ ರಸ್ತೆ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿಗೆ 12 ಅಡಿಯ ಜಾಗವನ್ನು ಬಿಟ್ಟುಕೊಡಬೇಕು. ಆದರೆ ಅದನ್ನು ಬಿಡದೇ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವದರಿಂದ ಆ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಭಾಗೀರಥಿ ಮಾತನಾಡಿ, ಶಾಲೆಯ ಆವರಣದಲ್ಲಿ ಈ ಭಾಗದ ಗ್ರಾಮಸ್ಥರು ಕಸ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಹಾಕುತ್ತಿದ್ದು, ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಅಳಲನ್ನು ತೋಡಿಕೊಂಡರು.
ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಮಾತನಾಡಿ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಜಾರಿಗೆ ಬಂದಿರುವ ಮಾತೃಪೂರ್ಣ ಯೋಜನೆಯನ್ನು ಇಲ್ಲಿನ ಫಲಾನುಭವಿಗಳು ಸಮರ್ಪಕ ವಾಗಿ ಪಡೆದುಕೊಳ್ಳುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.
ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿ, ಕೊಡಗರಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಅಂದಾಜು ರೂ. 52 ಲಕ್ಷ ಅನುದಾನ ವನ್ನು ಬಿಡುಗೊಡೆ ಗೊಳಿಸಲಾಗಿದ್ದು, ಹೆಚ್ಚಿನ ಕಾಮಗಾರಿ ಪೂರ್ಣ ಗೊಂಡಿದೆ. ಮಳೆಯ ಕಾರಣದಿಂದ ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಮಳೆ ನಿಂತ ಕೂಡಲೇ ಆರಂಭಿಸುವದಾಗಿ ತಿಳಿಸಿದರು. ಉಪ್ಪುತೋಡು- ಕಂಬಿಬಾಣೆಯ ರಸ್ತೆಯು ಹದಗೆಟ್ಟಿದ್ದು, ಈಗಾಗಲೇ ನೀರಾವರಿ ನಿಗಮದಿಂದ ರೂ. 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅದನ್ನು ಕೂಡಲೇ ಬಿಡುಗೊಡೆಗೊಳಿಸುವ ಭರವಸೆ ನೀಡಿದರು. ಅಧ್ಯಕ್ಷ ಅಬ್ಬಾಸ್ ಮಾತನಾಡಿ, ಕಸವಿಲೇವಾರಿಗೆ ಈಗಾಗಲೇ ಜಾಗವನ್ನು ಗುರುತಿಸಿದ್ದು, ಕಂದಾಯ ಇಲಾಖೆಯ ಬೇಜವಾ ಬ್ದಾರಿಯಿಂದ ಈ ಕೆಲಸ ಕಳೆಗುಂದಿದೆ. ಶವಗಾರಕ್ಕೆ ಸಂಬಂಧಿಸಿದಂತೆ ದಾಖಲೆಗಳ ಕೊರತೆ ಇರುವದರಿಂದ ಕೂಡಲೇ ಶಾಸಕರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳುವದಾಗಿ ತಿಳಿಸಿದರಲ್ಲದೇ, ಶಾಲೆಯ ಆವರಣದಲ್ಲಿ, ರಸ್ತೆ ಬದಿಯಲ್ಲಿ ಕಸವನ್ನು ಎಸೆಯುವದು ಕಂಡುಬಂದಲ್ಲಿ ಅವರ ಮೇಲೆ ದಂಡ ವಿಧಿಸುವ ಕ್ರಮ ಕೈಗೊಳ್ಳಲಾಗುವದು. ಗ್ರಾಮಸ್ಥರು ಈ ಎಲ್ಲ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು. ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರಿಗೆ ವಿವಿಧ ಪ್ರಯೋಜನಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪಿಡಿಓ ನಂದೀಶ್ ಕುಮಾರ್, ಕಾರ್ಯದರ್ಶಿ ಅಂಬುಜಾದೇವಿ, ತಾ.ಪಂ. ಸದಸ್ಯೆ ಹೆಚ್.ಡಿ. ಮಣಿ, ಗ್ರಾ.ಪಂ. ಉಪಾಧ್ಯಕ್ಷೆ ಪ್ರೇಮಾ, ನೋಡಲ್ ಅಧಿಕಾರಿ ಪಿ.ಎಸ್. ಬೋಪಯ್ಯ, ಗ್ರಾ.ಪಂ. ಸದಸ್ಯರಾದ ಸಲೀಂ, ಸುಮಿತ್ರ, ಶಾಲಿನಿ, ಲಲಿತ, ಜಯಲಕ್ಷ್ಮಿ, ವಸಂತ, ಎನ್.ಡಿ. ನಂಜಪ್ಪ, ನೀರಾವರಿ ಇಲಾಖೆಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್, ಗುತ್ತಿಗೆದಾರ ಇಬ್ರಾಹಿಂ, ಜಾನುವಾರು ಅಧಿಕಾರಿ. ಎ.ಪಿ. ಬೋಪಯ್ಯ, ಜಲನಯನ ಇಲಾಖೆಯ ಅಧಿಕಾರಿ ಮಂಜನಾಥ್ ಇತರರು ಇದ್ದರು.