ಭಾಗಮಂಡಲ, ಅ. 14: ಕೊಡಗಿನ ಸ್ವಚ್ಛತೆ ಕಾಪಾಡಲು ಜನ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಜನಾಂದೋಲನಾ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಕರೆ ನೀಡಿದರು.
ಗ್ರೀನ್ ಸಿಟಿ ಫೋರಂ ಸಂಘಟನೆ ಆಶ್ರಯದಲ್ಲಿ ಶನಿವಾರ ತಲಕಾವೇರಿಯಿಂದ ಭಗಂಡೇಶ್ವರ ಕ್ಷೇತ್ರದವರಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಜನಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮಕ್ಕೆ ತಲಕಾವೇರಿಯಲ್ಲಿ ಚಾಲನೆ ನೀಡಿ ಮಾತನಾಡಿದರು. ಕೊಡಗಿನ ಸುಂದರ ಪರಿಸರ ಮತ್ತು ವಾತಾವರಣವನ್ನು ಸುಂದರವಾಗಿಯೇ ಮುಂದಿನ ಜನರಿಗಾಗಿ ಉಳಿಸಿಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದರು.
ತಲಕಾವೇರಿ ಕ್ಷೇತ್ರದಲ್ಲಿ ಸ್ವಚ್ಛತಾ ಆಂದೋಲನಾ ಹಮ್ಮಿಕೊಂಡಿರುವದು ಸ್ವಾಗತರ್ಹ. ಕೊಡಗಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಸ್ವಚ್ಛತೆ ಕಾಪಾಡುವ ಸಂದೇಶ ರವಾನೆಯಾಗ ಬೇಕಾಗಿದೆ. ಕೊಡಗಿನಾದ್ಯಂತ ಸ್ವಚ್ಛತೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ದೊಡ್ಡ ಮಟ್ಟದ ಜನಾಂದೋಲನಾ ನಡೆಯಬೇಕಾಗಿದೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಸದಂತೆ ನೋಡಿಕೊಳ್ಳ ಬೇಕು. ಪ್ಲಾಸ್ಟಿಕ್ ಮುಕ್ತ ಮಾಡಿದಾಗ ಪರಿಸರದ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಮಾತನಾಡಿ, ಸ್ವಚ್ಛತೆ ಕಾಪಾಡುವ ಜವಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲೂ ಇದೆ. ಶಾಲಾ, ಕಾಲೇಜು, ದೇವಾಲಯ ಸೇರಿದಂತೆ ಪ್ರತಿಯೊಂದು ಸ್ಥಳದಲ್ಲಿಯೂ ಸ್ವಚ್ಛತಾ ಆಂದೋಲನಾ ಹಮ್ಮಿಕೊಳ್ಳಬೇಕೆಂದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸ್ವಚ್ಛತೆ ಕಾಪಾಡಬೇಕೆಂಬ ಮನಪರಿವರ್ತನೆ ಪ್ರತಿಯೊಬ್ಬರಲ್ಲಿಯೂ ಆಗಬೇಕು. ಪರಿಸರ ಸ್ವಚ್ಛತೆ ತನ್ನಿಂದ ಹಾಳಾಗಬಾರದೆಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಿದಾಗ ಮಾತ್ರ ಪರಿಸರದ ಸ್ವಚ್ಛತೆ ಕಾಪಾಡಲು ಸಾಧ್ಯವೆಂದರು.
ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಗ್ರೀನ್ ಸಿಟಿ ಫೋರಂ ಅಸ್ತಿತ್ವಕ್ಕೆ ತರಲಾಗಿದೆ. ಕೊಡಗಿನ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸ ಲಾಗುವದೆಂದು ಗ್ರೀನ್ ಸಿಟಿ ಫೋರಂ ಸಂಚಾಲಕ ಚೈಯ್ಯಂಡ ಸತ್ಯ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‍ಕುಮಾರ್, ಡಿವೈಎಸ್ಪಿ ಕೆ.ಎಸ್. ಸುಂದರ್‍ರಾಜ್, ಸರ್ಕಲ್ ಇನ್ಸ್‍ಪೆಕ್ಟರ್ ಪ್ರದೀಪ್ ಕುಮಾರ್, ಗ್ರೀನ್ ಸಿಟಿ ಫೋರಂ ಖಜಾಂಚಿ ಕಿರಿಯಮಾಡ ರತನ್ ತಮ್ಮಯ್ಯ, ಸದಸ್ಯರಾದ ಕುಕ್ಕೇರ ಜಯ ಚಿಣ್ಣಪ್ಪ, ಮೋಂತಿ ಗಣೇಶ್, ಅಂಬೆಕಲ್ ನವೀನ್ ಕುಶಾಲಪ್ಪ, ಕೃಷ್ಣಮೂರ್ತಿ, ಸವಿತಾ ಭಟ್, ಕ್ಲೀನ್ ಕೂರ್ಗ್ ಮುಖ್ಯಸ್ಥ ಬಡುವಂಡ ಅರುಣ್ ಅಪ್ಪಚ್ಚು ಮತ್ತಿತರರಿದ್ದರು.
ಜಿಲ್ಲಾಧಿಕಾರಿ ಡಾ.ಆರ್.ವಿ. ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಪೊರಕೆ ಹಿಡಿದು ಗುಡಿಸುವದರ ಮೂಲಕ ತಲಕಾವೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರೀನ್ ಸಿಟಿ ಫೋರಂ ಸದಸ್ಯರು, ಕ್ಲೀನ್ ಕೂರ್ಗ್ ಸಂಸ್ಥೆ ಸದಸ್ಯರು, 50ಕ್ಕೂ ಹೆಚ್ಚು ಪೊಲೀಸರು, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ 110 ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಭಾಗಮಂಡಲ- ತಲಕಾವೇರಿ ಮಾರ್ಗದಲ್ಲಿ ಬಂದ ಪ್ರತಿಯೊಂದು ವಾಹನಗಳನ್ನು ತಡೆದು, ಕೊಡಗಿನ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿಕೊಂಡರು. ನಮ್ಮ ನಡೆ, ಸ್ವಚ್ಛತೆ ಕಡೆ ಘೋಷಣೆಯೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.
ಫಲಕ ಅಳವಡಿಕೆ : ಗ್ರೀನ್ ಸಿಟಿ ಫೋರಂ ಸಂಘಟನೆಯಿಂದ ಭಗಂಡೇಶ್ವರ, ತಲಕಾವೇರಿ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವ ಜಾಗೃತಿ ಫಲಕ ಅಳವಡಿಸಲಾಯಿತು. ಎಸ್ಪಿ ರಾಜೇಂದ್ರ ಪ್ರಸಾದ್, ಡಿವೈಎಸ್ಪಿ ಕೆ.ಎಸ್. ಸುಂದರ್ ರಾಜ್ ಫಲಕ ಅಳವಡಿಸುವದರ ಮೂಲಕ ಫಲಕ ಅಳವಡಿಕೆಗೆ ಚಾಲನೆ ನೀಡಿದರು. ಸ್ವಚ್ಛತೆ ಕಾಪಾಡುವ ಜಾಗೃತಿಯ ಸ್ಟಿಕರ್‍ಗಳನ್ನು ಮೋಂತಿ ಗಣೇಶ್, ಸವಿತಾ ಭಟ್ ಅವರು ಭಾಗಮಂಡಲದಲ್ಲಿದ್ದ ಆಟೋರಿಕ್ಷಾ, ವಾಹನಗಳಿಗೆ ಅಂಟಿಸಿದರು.