ಸೋಮವಾರಪೇಟೆ, ಅ. 14: ಕೊಡವ ದೀನಬಂಧು ಚಾರಿಟೇಬಲ್ ಟ್ರಸ್ಟ್ ಮೈಸೂರು ವತಿಯಿಂದ ಸೂರ್ಲಬ್ಬಿ ವ್ಯಾಪ್ತಿಯ ಪಿಯುಸಿ, ಪದವಿ ಹಾಗೂ ವೃತ್ತಿಶಿಕ್ಷಣ ತರಬೇತಿ ಪಡೆಯುತ್ತಿರುವ ಜನಾಂಗದ ವಿದ್ಯಾರ್ಥಿಗಳಿಗೆ ರೂ. 1.86 ಲಕ್ಷ ಪ್ರೋತ್ಸಾಹ ಧನ ವಿತರಿಸಲಾಯಿತು.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಲ್ಗುಡಿ ಸಂಸ್ಥೆಯ ನಿರ್ದೇಶಕ ಚಾಮೇರ ದಿನೇಶ್ ಮಾತನಾಡಿ, ಸೂರ್ಲಬ್ಬಿ ಭಾಗದ ವಿದ್ಯಾರ್ಥಿಗಳಿಗೆ ಕಳೆದ 7 ವರ್ಷಗಳಿಂದ ದೀನಬಂಧು ಚಾರಿಟೇಬಲ್ ಟ್ರಸ್ಟ್‍ನಿಂದ ಎಸ್‍ಎಸ್‍ಎಲ್‍ಸಿ ತೇರ್ಗಡೆಹೊಂದಿದ ವಿದ್ಯಾರ್ಥಿಗಳಿಗೆ ತಲಾ ರೂ. 4 ಸಾವಿರ, ಪದವಿ ವಿದ್ಯಾರ್ಥಿಗಳಿಗೆ ರೂ. 8 ಸಾವಿರ, ವೃತ್ತಿ ಶಿಕ್ಷಣ ತರಬೇತಿ ವಿದ್ಯಾರ್ಥಿಗಳಿಗೆ ರೂ. 5 ಸಾವಿರ, ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳಿಗೆ 10 ಸಾವಿರದಂತೆ ಸಹಾಯಧನ ನೀಡಲಾಗುತ್ತಿದೆ ಎಂದರು. ಪ್ರಸಕ್ತ ಸಾಲಿನಲ್ಲಿ 24 ವಿದ್ಯಾರ್ಥಿಗಳಿಗೆ ರೂ. 1.86 ಲಕ್ಷ ಅನುದಾನ ನೀಡಲಾಗಿದೆ. ಇದರೊಂದಿಗೆ ಶಾಲೆಯ ಅಭಿವೃದ್ಧಿಗೆ ದಾನಿಗಳ ಮೂಲಕ ಸಹಾಯಧನ, ವಿದ್ಯಾರ್ಥಿಗಳಿಗೆ ಬಸ್‍ಪಾಸ್, ಖಾಸಗಿ ವಾಹನ, ಖಾಸಗಿ ಶಿಕ್ಷಕರಿಂದ ತರಬೇತಿ, ಪುಸ್ತಕ, ಪಾಠೋಪಕರಣ ವಿತರಣೆ, ರೈನ್‍ಕೋಟ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುತ್ತಾ ಬರಲಾಗುತ್ತಿದೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ಕೊಡವ ದೀನಬಂಧು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಕಟ್ಟೇರ ಕಾರ್ಯಪ್ಪ, ಕಾರ್ಯದರ್ಶಿ ಪಟ್ಟಡ ಜಯಕುಮಾರ್ ಅವರುಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಿದರು.
ಟ್ರಸ್ಟಿಗಳಾದ ಶಾಂತಿ ಗಣಪತಿ, ಚಿಮ್ಮಿ ನಂಜಪ್ಪ, ದೇಚಮ್ಮ, ಕರುಂಬಯ್ಯ, ಖಜಾಂಚಿ ಚೇಂದ್ರಿಮಾಡ ಮಾದಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್, ಯೋಗಾತ್ಮ, ಮುಖ್ಯೋಪಾ ಧ್ಯಾಯ ವೆಂಕಟೇಶ್ ನಾಯಕ್, ಸುಂದರಿ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.