ಸಿದ್ದಾಪುರ, ಅ. 13 : ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ.ಸಿ.ಗೀತಾ ಹಾಗೂ ಉಪಾಧ್ಯಕ್ಷರಾಗಿ ಎನ್.ಜಿ. ಗಾಯಿತ್ರಿ ಆಯ್ಕೆಗೊಂಡಿದ್ದಾರೆ. ಪ್ರತಿಸ್ಪರ್ಧಿಯಾಗಿ ಚುನಾವಣೆಗೆ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕಾಗಿ ಸಾಮಾನ್ಯ ಮಹಿಳೆಯರ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿತ್ತು. ಆದರೆ ಚೆನ್ನಯ್ಯನ ಕೋಟೆಯ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಎಂಬವರು ಚೆನ್ನಯ್ಯನಕೋಟೆಯಲ್ಲಿ ಪರಿಶಿಷ್ಟ ವರ್ಗ ಹಾಗೂ ಪಂಗಡದವರು ಹೆಚ್ಚಿನ ಜನ ಸಂಖ್ಯೆಯನ್ನು ಹೊಂದಿದ್ದು ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ನೀಡಬೇಕೆಂದು ನ್ಯಾಯಾಲಯದಲ್ಲಿ ಸರ್ಕಾರದ ಆದೇಶದ ವಿರುದ್ಧ ದಾವೆಯನ್ನು ಹೂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯು ನಡೆಯದೆ ವಿಳಂಬವಾಗಿತ್ತು. ಇದೀಗ ನ್ಯಾಯಾಲಯವು ಸರ್ಕಾರದ ಆದೇಶದಂತೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನವು ಸಾಮಾನ್ಯ ಮಹಿಳೆಗೆ ನೀಡುವಂತೆ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಇಂದು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಯನ್ನು ತಹಶೀಲ್ದಾರ್ ಗೋವಿಂದ ರಾಜು ನಡೆಸಿದರು. ಒಟ್ಟು 17 ಮಂದಿ ಸದಸ್ಯರಿರುವ ಗ್ರಾಮ ಪಂಚಾಯಿತಿ ಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಸಿ. ಗೀತಾ ಸ್ಪರ್ಧಿಸಿದರು. ಇವರಿಗೆ 9 ಮತಗಳು ಲಭಿಸಿದ್ದು ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಿ.ಆರ್. ಶೀಲಾರವರಿಗೆ 8 ಮತಗಳು ಲಭಿಸಿದ್ದು ಅಧ್ಯಕ್ಷೆಯಾಗಿ ಗೀತಾ ಜಯಶೀಲಾರದರು. ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎನ್.ಜಿ. ಗಾಯಿತ್ರಿ 10 ಮತ ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಎಂ. ಜಾನಕಿ 7 ಮತಗಳು ಪಡೆದು ಪರಭವಗೊಂಡರು. ಉಪಾಧ್ಯಕ್ಷರಾಗಿ ಎನ್.ಜಿ. ಗಾಯಿತ್ರಿ ಆಯ್ಕೆಗೊಂಡರು.
ನಂತರ ವಿಜೇತ ಅಭ್ಯರ್ಥಿಗಳನ್ನು ಬಿಜೆಪಿಯ ಕಾರ್ಯಕರ್ತರು ಹೂವಿನ ಹಾರ ಹಾಕಿ ಸನ್ಮಾನಿಸಿದರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೆ ಸಂದರ್ಭ ಮಾತನಾಡಿದ ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಾಯ್ಯ ಮಾತನಾಡಿ ಕಳೆದ ಎರಡೂವರೆ ವರ್ಷಗಳಿಂದ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಇಲ್ಲದೆ ನೆನೆಗುದ್ದಿಗೆ ಬಿದ್ದಿತ್ತು. ಇದೀಗ ಅವಕಾಶ ವಂಚಿತರಿಗೆ ಅವಕಾಶ ಒದಗಿ ಬಂದಿದ್ದು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಗ್ರಾಮದ ಮೂಲಭೂತ ಸೌಲಭ್ಯಗಳಿಗೆ ಹಾಗೂ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಿ ಗ್ರಾಮಾಭಿವೃದ್ಧಿ ಪಡಿಸುವಂತೆ ಕಿವಿ ಮಾತು ಹೇಳಿದರು.
ಈ ಸಂದರ್ಭ ತಾ.ಪಂ ಸದಸ್ಯ ಅಜೀತ್ ಕರುಂಬಯ್ಯ, ಚೆನ್ನಯ್ಯನ ಕೋಟೆ ಸ್ಥಾನೀಯ ಸಮಿತಿಯ ಅಧ್ಯಕ್ಷ ರತೀಶ್, ಬಿಜೆಪಿ ಮುಖಂಡರುಗಳಾದ ಮಲ್ಲಂಡ ಮಧುದೇವಯ್ಯ, ಮೇಕೆರಿರ ಅರುಣ್, ಅಪ್ಪು, ದಿನೇಶ್, ದೀಪಕ್, ನರಸಿಂಹ, ಇತರರು ಹಾಜರಿದ್ದರು.