ಸೋಮವಾರಪೇಟೆ, ಅ. 13: ಸಾವಿರಾರು ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೈಗೊಳ್ಳುವ ಕೆಲಸಗಳಲ್ಲಿ ರಾಜಕೀಯ ಹಿತಾಸಕ್ತಿ ನುಸುಳಿದರೆ ಏನಾಗುತ್ತದೆ ಎಂಬದಕ್ಕೆ ಸೋಮವಾರಪೇಟೆಯಲ್ಲಿ ಕಳೆದ 10 ವರ್ಷಗಳ ಹಿಂದೆ ಭೂಮಿಪೂಜೆ ನೆರವೇರಿದ ಶತಮಾನೋತ್ಸವ ಭವನವೇ ಸಾಕ್ಷಿ!ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಕನಸ್ಸಿನ ಕೂಸಾದ ಶತಮಾನೋತ್ಸವ ಭವನ ರಾಜಕೀಯ ಮೇಲಾಟದಲ್ಲಿ ಸೂಕ್ತ ಹಣಕಾಸು ನೆರವಿಲ್ಲದೆ ಕಳೆದ 10 ವರ್ಷಗಳಿಂದ ಪಾಳುಬಿದ್ದ ಭೂತ ಬಂಗಲೆಯಂತಾಗಿದ್ದು, ಸದ್ಯದ ಮಟ್ಟಿಗೆ ಜಾನುವಾರುಗಳಿಗೆ ಆಶ್ರಯ ನೀಡುವ ತಾಣದಂತಾಗಿದೆ.
ಶತಮಾನೋತ್ಸವದ ನೆನಪು: ಸೋಮವಾರಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಒಂದು ಶತಮಾನಕ್ಕೂ ಅಧಿಕ ವರ್ಷಗಳ ಇತಿಹಾಸವಿದ್ದು, ಈ ಶಾಲೆಯಲ್ಲಿ ಓದಿದ ಅನೇಕರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಹಲವರು ವಿದೇಶಗಳಲ್ಲಿ ನೆಲೆಸಿದ್ದರೆ, ಬಹುತೇಕರು ದೇಶದ ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ. ಅದರಂತೆ ರಾಜಕಾರಣದಲ್ಲೂ ನೂರಾರು ಮಂದಿ ಇದ್ದಾರೆ. ಇದಕ್ಕೆ ಪೂರಕವೆಂಬಂತೆ ತಾವು ಓದಿದ ಶಾಲೆಗೆ 100 ವರ್ಷ ತುಂಬಿದ ಸವಿನೆನಪನ್ನು ಶಾಶ್ವತವಾಗಿಸಲು ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ, ಅಂದಿನ ಶಾಸಕರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಬಿ.ಎ.ಜೀವಿಜಯರನ್ನು ಭೇಟಿಯಾಗಿ ಚರ್ಚಿಸಿ, ಸವಿನೆನಪಿಗಾಗಿ ಕಳೆದ 10 ವರ್ಷದ ಹಿಂದೆ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
1.25 ಕೋಟಿ ವೆಚ್ಚದ ಅಂದಾಜು ಪಟ್ಟಿ: 2007 ರಲ್ಲಿ ರೂ. 1.25 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸಲಾಯಿತು. ಅಂದಿನ ಶಾಸಕ ಬಿ.ಎ.ಜೀವಿಜಯ ತಮ್ಮ ಶಾಸಕರ ನಿಧಿಯಿಂದ ರೂ. 18 ಲಕ್ಷ ಅನುದಾನ ನೀಡಿದರು. ನಂತರ ಬೇರೆ ಬೇರೆ ಮೂಲದಿಂದ ಹಣ ಸಂಗ್ರಹಿಸುವದಕ್ಕೆ ಮುಂದಾದರು. ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ವಿವಿಧ ಹಂತಗಳಲ್ಲಿ ರೂ 15 ಲಕ್ಷ, ರಾಜ್ಯ ಸಭಾ ಸದಸ್ಯ ರೆಹಮಾನ್ಖಾನ್ರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ 4 ಲಕ್ಷ, ಕೇಂದ್ರ ಸಚಿವ ಎಂ.ವಿ. ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ. 2.5 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ. 3 ಲಕ್ಷ ಒದಗಿಸಿದ್ದರು. ಈ ಹಣದಲ್ಲಿ ಕಾಮಗಾರಿ ಪ್ರಾರಂಭವಾಯಿತು.
ಕೆಲ ಸಮಯದಲ್ಲೇ ವಿಘ್ನ: ಬಿ.ಎ.ಜೀವಿಜಯರವರ ಉತ್ಸಾಹದಿಂದ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರೂ ನಂತರ ಎದುರಾದ ವಿಧಾನಸಭೆ ವಿಸರ್ಜನೆ ಅವರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಯಿತು. ನಂತರದ ಚುನಾವಣೆಯಲ್ಲಿ ಜೀವಿಜಯ ಅವರು ಪರಾಭವಗೊಂಡರು. ಇದರೊಂದಿಗೆ ಈ ಶಾಲೆಯ ಶತಮಾನೋತ್ಸವ ಭವನಕ್ಕೆ ಅನುದಾನದ ಗ್ರಹಣ ಹಿಡಿಯಿತು. ಅಷ್ಟೊತ್ತಿಗಾಗಲೆ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು.
ಪಾಳು ಬಿದ್ದ ಭೂತ ಬಂಗಲೆ: ನಂತರ ದಿನಗಳಲ್ಲಿ ಯಾರೂ ಅತ್ತ ತಿರುಗಿಯೂ ನೋಡಲಿಲ್ಲ. ಶತಮಾನೋತ್ಸವ ಭವನ ಪಾಳು ಬಿದ್ದಿರುವ ಭೂತ ಬಂಗಲೆಯಂತಾಯಿತು. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ, ಅಧಿಕ ಪ್ರಮಾಣದಲ್ಲಿ ಪರಿಕರಗಳ ಬೆಲೆ ಏರಿರುವದರಿಂದ ಕೆಲಸ ಪೂರ್ಣಗೊಳಿಸಲು ಇನ್ನು 1 ಕೋಟಿ ರೂ. ಗಳ ಅನುದಾನ ಅವಶ್ಯಕತೆಯಿದೆ. ಶಾಲೆಯ ಪಕ್ಕದಲ್ಲಿ ಭವನ ನಿರ್ಮಾಣಕ್ಕೆ ಸುಮಾರು 30 ಸೆಂಟ್ ಸ್ಥಳದಲ್ಲಿ 80 ಚದರ ವಿಸ್ತೀರ್ಣದ ಬೃಹತ್ ಭವನದಲ್ಲಿ 1500 ರಿಂದ 2000 ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಕಟ್ಟಡದ ನೆಲಮಾಳಿಗೆಯಲ್ಲಿ ಅಡುಗೆ ಮನೆ ಹಾಗೂ ಊಟದ ಸಭಾಂಗಣಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹೆಚ್ಚುವರಿಯಾಗಿ 5 ಲಕ್ಷ: ಕಳೆದ ಮೂರು ವರ್ಷಗಳ ಹಿಂದೆ ಶತಮಾನೋತ್ಸವ ಭವನವನ್ನು ಮತ್ತೆ 5 ಲಕ್ಷ ವಿನಿಯೋಗಿಸಿ ಗೋಡೆಗಳಿಗೆ ಪ್ಲಾಸ್ಟರಿಂಗ್, ಶಟ್ಟರ್ಸ್, ಕಿಟಕಿ ಬಾಗಿಲು ನಿರ್ಮಿಸಲಾಯಿತು. ಇದಾಗಿ ಮೂರು ವರ್ಷದ ತರುವಾಯ ಎಲ್ಲವೂ ದುರಸ್ತಿಗೀಡಾಗಿದ್ದು, ಪ್ರಸ್ತುತ ಬಾಗಿಲುಗಳು ಮುರಿದು ಬಿದ್ದಿರುವ ಪರಿಣಾಮ ಜಾನುವಾರುಗಳು ಶತಮಾನೋತ್ಸವ ಭವನದಲ್ಲಿ ಬೀಡುಬಿಟ್ಟಿವೆ.
1ಕೋಟಿ ಅನುದಾನಕ್ಕೆ ಪ.ಪಂ. ಕೊಕ್ಕೆ: ಈ ಹಿಂದೆ ಕೇಂದ್ರ ಸರ್ಕಾರ ಪುರಸ್ಕøತ ಯುಐಡಿಎಸ್ಎಸ್ಎಂಟಿ ಯೋಜನೆಯಡಿ ಪಟ್ಟಣ ಪಂಚಾಯಿತಿ 20ಕೋಟಿ ರೂ. ಗಳ ಕ್ರಿಯಾಯೋಜನೆಯನ್ನು ತಯಾರಿಸಿ, ಇದರಲ್ಲಿ ಶತಮಾನೋತ್ಸವ ಭವನ ಕಾಮಗಾರಿಗೆಂದು ಒಂದು ಕೋಟಿ ರೂ.ಗಳನ್ನು ಮೀಸಲಿಡಲು ನಿರ್ಧರಿಸಲಾಗಿತ್ತು.
2013ರ ಅ.22ರಂದು ಅಂದಿನ ಪಂಚಾಯಿತಿ ಅಧ್ಯಕ್ಷೆ ಲೀಲಾ ನಿರ್ವಾಣಿ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯಿತಿ ಪ್ರಥಮ ಸಾಮಾನ್ಯ ಸಭೆಯಲ್ಲಿ ಶತಮಾನೋತ್ಸವ ಭವನ ಕಾಮಗಾರಿಗೆ ಮೀಸಲಿಟ್ಟಿದ್ದ ಹಣವನ್ನು ಪಟ್ಟಣದ ಕುಡಿಯುವ ನೀರಿನ ಸರಬರಾಜಿಗೆ ಮೋಟಾರು ಖರೀದಿಸಲು ಮಾರ್ಪಾಡು ಮಾಡುವಂತೆ ಒತ್ತಾಯಿಸಿ, ಶತಮಾನೋತ್ಸವ ಭವನವಿರುವದು ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಪಟ್ಟಣ ಅಭಿವೃದ್ಧಿಗೆ ಮೀಸಲಾದ ಹಣವನ್ನು ಅಲ್ಲಿಗೆ ವಿನಿಯೋಗಿಸಲು ಸಾಧ್ಯವಿಲ್ಲ ಎಂದು ಪಟ್ಟುಹಿಡಿದಿದ್ದರು. ಮತ್ತೆ ಕೆಲವರು ಅದರ ಪ್ರಯೋಜನದ ಕುರಿತು ವಾದಿಸಿದ್ದರು.
ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು. ರೂ. 1 ಕೋಟಿ ಅನುದಾನಕ್ಕೂ ಕೊಕ್ಕೆ ಬಿತ್ತು. ಒಟ್ಟಾರೆ ಸಾವಿರಾರು ಮಂದಿಗೆ ಉಪಯೋಗವಾಗುವ ಈ ಭವನವನ್ನು ಪೂರ್ಣಗೊಳಿಸುವ ಪ್ರಬಲ ಇಚ್ಛಾಶಕ್ತಿ, ರಾಜಕೀಯ ರಹಿತ ಕಾರ್ಯದಕ್ಷತೆ, ಜನೋಪಕಾರದ ಮನಸ್ಸು ರಾಜಕೀಯ ನಾಯಕರುಗಳಿಗೆ/ಅಧಿಕಾರಿ ವರ್ಗಕ್ಕೆ ಲಭಿಸಲಿ ಎಂಬದು ಈ ಶಾಲೆಯ ಹಳೆ ವಿದ್ಯಾರ್ಥಿಗಳೂ ಸೇರಿದಂತೆ ಸೋಮವಾರಪೇಟೆ ವ್ಯಾಪ್ತಿಯ ಸಾರ್ವಜನಿಕರ ಆಶಯವಾಗಿದೆ.
- ವಿಜಯ್ ಹಾನಗಲ್