ಮಡಿಕೇರಿ, ಅ. 13: ಉತ್ತರ ಪ್ರದೇಶ ವಿಧಾನಸಭಾ ಚುಣಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲು ಸಾಮಾಜಿಕ ಜಾಲತಾಣದ ಸಮರ್ಪಕ ಬಳಕೆಯೇ ಕಾರಣವಾಗಿದ್ದು, ಕರ್ನಾಟಕದಲ್ಲೂ ಈ ತಂತ್ರವನ್ನು ಬಳಸಿಕೊಳ್ಳಬೇಕೆಂದು ಬಿಜೆಪಿ ಸಾಮಾಜಿಕ ಜಾಲತಾಣದ ವಿಭಾಗ ಪ್ರಬಾರಿ ನಿತೀನ್ ಶೆಟ್ಟಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನಗರದ ಬಾಲಭಾವನದಲ್ಲಿ ನಡೆದ ಕೊಡಗು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೇಂದ್ರ ಸರಕಾರದ ಅಭಿವೃದ್ಧಿ ಯೋಜನೆಗಳ ಜೊತೆಗೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದರು.

ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಭಾರತೀಶ್ ಮಾತನಾಡಿ, ಜನರನ್ನು ಜಾಗೃತಿಗೊಳಿಸಲು ಸಾಮಾಜಿಕ ಜಾಲತಾಣದ ಬಳಕೆ ಸಮರ್ಪಕವಾಗಿ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಮಾಜಿಕ ಜಾಲತಾಣ ಪ್ರಕೋಷ್ಠಾದ ಜಿಲ್ಲಾ ಸಂಚಾಲಕ ಕಾಳಚಂಡ ಅಪ್ಪಣ್ಣ, ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿದ್ದು, ಉತ್ತಮ ಸ್ಪಂದನ ಸಿಕ್ಕಿದೆ ಎಂದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ, ನಗರಸಭಾ ಸದಸ್ಯೆ ಅನಿತಾ ಪೂವಯ್ಯ, ಸವಿತಾ ರಾಕೇಶ್, ಸಹ ಸಂಚಾಲಕರಾದ ಪೊನ್ನಪ್ಪ, ಯೋಗೇಶ್ ನಾಯ್ಡು, ವಿಜಯ್, ನವೀನ್, ರಜಿತ್, ದಿವಿನ್ ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು. ಭಾರತೀ ರಮೇಶ್ ಪ್ರಾರ್ಥಿಸಿ, ಮೀನಾ ಪ್ರವೀಣ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಗುಡ್ಡೆಹೊಸೂರು: ಸಮುದಾಯ ಭವನದಲ್ಲಿ ಬಿ.ಜೆ.ಪಿ. ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಶೇ. 90 ರಷ್ಟು ಜನಪರ ಕಾರ್ಯಗಳು ಕೇಂದ್ರ ಸರಕಾರದ್ದು, ಆದರೆ ಅದನ್ನು ರಾಜ್ಯ ಸರಕಾರ ತಮ್ಮ ಸಾಧನೆ ಎಂದು ಬಿಂಬಿಸುತ್ತಿವೆ ಎಂದು ಈ ಸಂದರ್ಭ ಪ್ರತಾಪ್‍ಸಿಂಹ ಗಂಭೀರ ಆರೋಪ ಮಾಡಿದರು.

ಸಭೆಯಲ್ಲಿ ಬಿ.ಜೆ.ಪಿ. ಅಧ್ಯಕ್ಷ ಕುಮಾರಪ್ಪ, ಬಿ.ಜೆ.ಪಿ.ಯ ವಿವಿಧ ಪದಾಧಿಕಾರಿಗಳು ಮತ್ತು ಗ್ರಾ.ಪಂ. ಸದಸ್ಯರುಗಳು ಸುಮಾರು 100ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಪಕ್ಷದ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮತ್ತು ಸ್ಥಳೀಯ ಮುಖಂಡ ಎಂ.ಆರ್. ಉತ್ತಪ್ಪ ಮುಂತಾದವರು ಈ ಸಂದರ್ಭ ಹಾಜರಿದ್ದರು.

ಸೋಮವಾರಪೇಟೆ: ಕಳೆದ ಸಾಲಿನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ರೂ. 1800 ಕೋಟಿ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಮಾಡಲಾಗಿದೆ. ಇದೀಗ ಅಭಿವೃದ್ಧಿ ನಿಂತ ನೀರಾಗಿದ್ದು, ಮತ್ತೊಮ್ಮೆ ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ಅವರನ್ನು ಗೆಲ್ಲಿಸಿ ಮುಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೊಡಗಿನ ಅಭಿವೃದ್ಧಿಗೆ ಶ್ರಮವಹಿಸುತ್ತಾರೆ ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ನುಡಿದರು.

ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ತಾಲೂಕು ಸಮಿತಿ ವತಿಯಿಂದ ತಾಲೂಕಿನ ಗರ್ವಾಲೆ, ಬೆಟ್ಟದಳ್ಳಿ, ಶಾಂತಳ್ಳಿ, ತೋಳೂರುಶೆಟ್ಟಳ್ಳಿ, ಹಾನಗಲ್ಲು, ಚೌಡ್ಲು, ಕಿರಗಂದೂರು ಮತ್ತು ಐಗೂರು ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ಜನ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕೊಡಗಿನ ಅಭಿವೃದ್ಧಿ ಹಾಗೂ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಕುರಿತು ಚರ್ಚಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯುವ ಕುರಿತು ಪ್ರಸ್ತಾಪಿಸದ ಕಾಂಗ್ರೆಸ್ ಸದಸ್ಯರು, ಜಿ.ಪಂ. ವ್ಯಾಪ್ತಿಗೆ ಒಳಪಡದ ಗೋಣಿಕೊಪ್ಪಲುವಿನ ಎಪಿಎಂಸಿ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೊಡಗಿನವರೇ ಆದ ಸಚಿವ ಕೆ.ಜೆ. ಜಾರ್ಜ್ ಕೊಡಗಿನ ಅಧಿಕಾರಿಗಳಿಗೆ ಕಿರುಕುಳ ಕೊಟ್ಟಿದ್ದೇ ಹೆಚ್ಚು. ಜನ ಸಾಮಾನ್ಯರ ಪ್ರಕರಣವನ್ನು ಸಿಓಡಿ ಕೈಗೆತ್ತಿಕೊಂಡರೆ 3 ವರ್ಷವಾದರೂ ತನಿಖೆ ಮುಗಿಯುವದಿಲ್ಲ. ಆದರೆ ಡಿವೈಎಸ್‍ಪಿ ಗಣಪತಿ ಪ್ರಕರಣ ಹಾಗೂ ಸಚಿವ ಮೇಟಿ ಪ್ರಕರಣವನ್ನು ಕೇವಲ 2 ತಿಂಗಳಲ್ಲಿ ಮುಗಿಸಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದು ಎಷ್ಟು ಸರಿ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ಪೂರ್ಣಿಮಾ ಗೋಪಾಲ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಸದಸ್ಯೆ ತಂಗಮ್ಮ, ಧರ್ಮಪ್ಪ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಬಿಜೆಪಿ ಕಾರ್ಯದರ್ಶಿ ಮನುಕುಮಾರ್ ರೈ, ಪ್ರಮುಖರಾದ ಉಷಾ ತೇಜಸ್ವಿ, ಸುಮಾ ಸುದೀಪ್, ಮಡಿಕೇರಿ ಬಿಜೆಪಿ ಕ್ಷೇತ್ರಿಯ ಸಮಿತಿ ಅಧ್ಯಕ್ಷ ಎಂ.ಎನ್. ಕೊಮಾರಪ್ಪ, ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಸುಭಾಷ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಗಣೇಶ್, ಯುವ ಮೋರ್ಚಾದ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಸಚಿನ್, ಸ್ಥಾನೀಯ ಸಮಿತಿಗಳ ಅಧ್ಯಕ್ಷರು, ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.