ಸೋಮವಾರಪೇಟೆ, ಅ.14: ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ವೊಂದರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಸರ್ಕಾರದ ಸಚಿವರಾದ ರೋಷನ್ ಬೇಗ್ ಅವರು ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರಪೇಟೆ ಯಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ರೋಷನ್ ಬೇಗ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ದೇಶದ ಪ್ರಧಾನಿಯ ವಿರುದ್ಧವೇ ಕೀಳು ಮಟ್ಟದ ಭಾಷಾ ಪ್ರಯೋಗ ಮಾಡಿರುವ ಬೇಗ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ ಸಂಸದ ಪ್ರತಾಪ್ ಸಿಂಹ, ತಾ. 16ರಂದು ಬಿಜೆಪಿ ಯುವ ಮೋರ್ಚಾದಿಂದ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಕಾರ್ಯಕರ್ತರು ಸಚಿವ ರೋಷನ್ ಬೇಗ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ಅಭಿಮನ್ಯುಕುಮಾರ್ ಮಾತನಾಡಿ, ಮೋದಿ ವಿರುದ್ಧ ಕೀಳು ಭಾಷೆಯನ್ನು ಬಳಸಿರುವದು ಅಕ್ಷಮ್ಯವಾಗಿದ್ದು, ಇಂತವರು ಸಚಿವ ಸ್ಥಾನದಲ್ಲಿರುವದು ಅನೈತಿಕತೆಯ ಸಂಕೇತ ಎಂದರು.

ಪ್ರತಿಭಟನೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್,

(ಮೊದಲ ಪುಟದಿಂದ) ವೀರಾಜಪೇಟೆಯ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯರಾದ ತಂಗಮ್ಮ, ಧರ್ಮಪ್ಪ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸದಸ್ಯರಾದ ಸುಶೀಲ, ಲೀಲಾ ನಿರ್ವಾಣಿ, ಮಹಿಳಾ ಮೋರ್ಚಾದ ನಳಿನಿ ಗಣೇಶ್, ಸುಮಾ ಸುದೀಪ್, ಉಷಾ ತೇಜಸ್ವಿ, ಜಲಜಾ ಶೇಖರ್, ಪ್ರಮುಖರಾದ ಜೆ.ಸಿ. ಶೇಖರ್, ಎಸ್.ಆರ್. ಸೋಮೇಶ್, ಟಿ.ಕೆ. ರಮೇಶ್, ಯುವ ಮೋರ್ಚಾದ ಮಹೇಶ್ ತಿಮ್ಮಯ್ಯ, ಕಿಬ್ಬೆಟ್ಟ ಮಧು, ಶರತ್‍ಚಂದ್ರ, ಶ್ರೀಕಾಂತ್, ಕುಶಾಲನಗರದ ಕೃಷ್ಣಪ್ಪ ಕಿಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಕುಶಾಲನಗರ

ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಿದ ಸಚಿವ ರೋಷನ್ ಬೇಗ್ ವಿರುದ್ಧ ಕುಶಾಲನಗರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಚಿವ ರೋಷನ್ ಬೇಗ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೋದಿ ವಿರುದ್ಧ ಕೆಟ್ಟ ಪದಗಳನ್ನು ಬಳಸಿದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಜಿ.ಎಲ್.ನಾಗರಾಜ್ ರೋಷನ್ ಬೇಗ್ ಪ್ರಧಾನಿ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿರುವದು ಖಂಡನೀಯ ಎಂದರು.

ಈ ಸಂದರ್ಭ ಕುಶಾಲನಗರ ಪೊಲೀಸ್ ಠಾಣೆಗೆ ಸಚಿವರ ವಿರುದ್ಧ ದೂರು ನೀಡಲಾಯಿತು.

ಪ್ರತಿಭಟನೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ, ಸದಸ್ಯರಾದ ಹೆಚ್.ಎಂ. ಮಧುಸೂದನ್, ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕಾರ್ಯದರ್ಶಿ ಶಿವಾಜಿರಾವ್, ಕ್ಷೇತ್ರಾಧ್ಯಕ್ಷ ಎಂ.ಎನ್.ಕುಮಾರಪ್ಪ, ಪ್ರಮುಖರಾದ ಕೇಚಪ್ಪನ್ ಮೋಹನ್‍ಕುಮಾರ್, ಬಿ.ಜೆ.ಅಣ್ಣಯ್ಯ, ಸತೀಶ್, ಪುಂಡರೀಕಾಕ್ಷ, ಎಂ.ವಿ. ನಾರಾಯಣ, ಹೆಚ್.ಎನ್. ರಾಮಚಂದ್ರ ಮತ್ತಿತರರು ಇದ್ದರು.