ಶನಿವಾರಸಂತೆ, ಅ. 14: ರಾಜ್ಯದಲ್ಲಿ ನಡೆದಿರುವ ಶೇ. 90 ರಷ್ಟು ಕೇಂದ್ರ ಸರಕಾರದ ಜನಪರ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ತಮ್ಮ ಸಾಧನೆಯೆಂದು ಬಿಂಬಿಸುತ್ತಿದೆ. ಆದರೆ, ಕೊಡಗು ಜಿಲ್ಲೆಯ ಅಭಿವೃದ್ಧಿ ಎಂದಾಗ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರನ್ನು ಜನತೆ ಸ್ಮರಿಸಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.

ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ತಾಲೂಕು ಸಮಿತಿ ವತಿಯಿಂದ ಕೇಂದ್ರ ಸರಕಾರದ ಜನಪರ ಕಾರ್ಯಕ್ರಮ, ರಾಜ್ಯ ಸರಕಾರದ ದುರಾಡಳಿತ ಹಾಗೂ ಜನವಿರೋಧಿ ನೀತಿ ಬಗ್ಗೆ ಶನಿವಾರ ನಡೆದ ಜನ ಜಾಗೃತಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ರೂ. 1800 ಕೋಟಿ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಮಾಡಲಾಗಿತ್ತು ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಭಾರತದಲ್ಲಿ ನಡೆದಿರುವ ಎಲ್ಲಾ ಕ್ಷೇತ್ರದ ಜನಪರ ಕಾರ್ಯಕ್ರಮಗಳಿಂದ ಪ್ರಪಂಚದ ಎಲ್ಲಾ ರಾಷ್ಟ್ರಗಳು ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ನಾಲ್ಕೂವರೆ ವರ್ಷದ ಸಿದ್ದರಾಮಯ್ಯ ಸರಕಾರದಲ್ಲಿ ಪೊಲೀಸರ ಆತ್ಮಹತ್ಯೆ ಸಾಧನೆಯಾಗಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹಾಗೂ ಬಿಜೆಪಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಸರೋಜಮ್ಮ, ಗ್ರಾ.ಪಂ. ಅಧ್ಯಕ್ಷೆ ಮಹಮ್ಮದ್ ಗೌಸ್, ಪ್ರಮುಖರಾದ ಎಸ್.ಜಿ. ಮೇದಪ್ಪ, ವಿ.ಕೆ. ಲೋಕೇಶ್, ಉಷಾ ತೇಜಸ್ವಿ, ಯತೀಶ್, ರಾಜೇಂದ್ರ ಪ್ರಸಾದ್, ಭುವನೇಶ್ವರಿ ಇತರರು ಇದ್ದರು.