*ಗೋಣಿಕೊಪ್ಪಲು, ಅ. 13 : ರಾಜ್ಯಮಟ್ಟದ ವನವಾಸಿ ಬಿಲ್ಲುಗಾರಿಕೆ ಹಾಗೂ ನೂತನ ಖೋ-ಖೋ ಕ್ರೀಡಾಕೂಟಕ್ಕೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ರಾಜ್ಯ ವನವಾಸಿ ಕಲ್ಯಾಣ ಸಮಿತಿ ವತಿಯಿಂದ ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ಶಾಸಕರು ಬಿಲ್ಲಿನಿಂದ ಬಾಣ ಬಿಡುವ ಮೂಲಕ ಎರಡು ದಿನಗಳ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.

ವ್ಯವಸ್ಥೆಯಿಂದ ವಂಚಿತ ರಾಗುತ್ತಿರುವ ವನವಾಸಿಗರನ್ನು ಮುಖ್ಯವಾಹಿನಿಗೆ ಕರೆತಂದು ಉತ್ತಮ ತರಬೇತಿ ನೀಡುವ ಮೂಲಕ ಅವರ ಪ್ರತಿಭೆಗೆ ಮನ್ನಣೆ ದೊರಕುವಂತೆ ಮಾಡಬೇಕಾಗಿದೆ. ವನವಾಸಿಗರಿಗೆ ಮೂಲ ಸೌಕರ್ಯಗಳನ್ನು ನೀಡಿ ಉತ್ತಮ ಕ್ರೀಡಾಪಟುಗಳಾಗಿ ರೂಪಿಸಲು ಮುಂದಾಗಬೇಕು ಎಂದು ಹೇಳಿದರು. ಪರಿಸರ ಉಳಿವಿಗೆ ಇಂದು ಬುಡಕಟ್ಟು ವನವಾಸಿಗರ ಸೇವೆ ಅತ್ಯಾಮೂಲ್ಯವಾಗಿದೆ. ಬ್ರೀಟಿಷರ ಕುತಂತ್ರದಿಂದ ಸಮಾಜದ ಮುಖ್ಯ ವಾಹಿನಿಯಿಂದ ಬೇರ್ಪಟ್ಟ ವನವಾಸಿಗರಿಗೆ ಉತ್ತಮ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ನಡೆಯ ಬೇಕಾಗಿದೆ ಎಂದರು. ಯಾವದೇ ತರಬೇತಿ ಇಲ್ಲದೆ ಕ್ರೀಡೆಯನ್ನು ರಕ್ತಾಗತವಾಗಿ ಬೆಳೆಸಿಕೊಂಡ ಇವರಿಗೆ ಅವಕಾಶ ದೊರೆತರೆ ರಾಷ್ಟ್ರಮಟ್ಟದಲ್ಲಿ ಕೀರ್ತಿಯ ಪತಾಕೆ ಹಾರಿಸಬಲ್ಲರು ಎಂದು ಹೇಳಿದರು.

ಪೆÇನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮಿ ಈಶ ಪ್ರೇಮನಂದಜೀ ಮಾತನಾಡಿ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ. ಭಾರತದಲ್ಲಿ ಅಗಾದವಾದ ಶಕ್ತಿ ಅಡಗಿದೆ. ಜೀವನದ ಗುರಿ ಮತ್ತು ಧ್ಯೇಯ ಹೊಂದಿದ್ದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವೇದ ಪುರಾಣಗಳು ರಾಮಾಯಣ, ಮಹಾಭಾರತ ಅಧ್ಯಯನದಿಂದ ಭಾರತದ ಸಂಸ್ಕøತಿಯನ್ನು ತಿಳಿದು ಕೊಳ್ಳಬೇಕಾಗಿದೆ. ಸಾಂಪ್ರದಾಯಿಕ ಬಿಲ್ಲು ವಿದ್ಯೆಯನ್ನು ವನವಾಸಿಗರು ಹುಟ್ಟಿನಿಂದ ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು.

ರಾಜ್ಯ ವನವಾಸಿ ಕಲ್ಯಾಣ ಸಮಿತಿಯ ಅಧ್ಯಕ್ಷ ವೆಂಕಟೇಶ್ ಸಾಗರ್ ಮಾತನಾಡಿ ನಾವು ಭಾರತೀಯರು ಎಂದು ಕೂಗಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದರೆ ವಿಪರ್ಯಾಸವೇ ಸರಿ. ಇಂದು ವನವಾಸಿಗರು ಗ್ರಾಮ ನಿವಾಸಿಗರು, ನಗರ ನಿವಾಸಿಗಳು ಎಂದು ಹೇಳುವ ಪರಿಸ್ಥಿತಿಯ ಹಿಂದೆ ಬ್ರಿಟೀಷರ ಮತಾಂತರದ ಕುತಂತ್ರ ಅಡಗಿದೆ. ಆದಿವಾಸಿಗಳನ್ನು ಮತಾಂತರಗೊಳಿಸುವ ಹುನ್ನಾರ ದಿಂದಲೇ ನಗರದಿಂದ ಪ್ರತ್ಯೇಕ ಮಾಡಿದ್ದಾರೆ. ವನವಾಸಿಗರನ್ನು ಮುಖ್ಯವಾಹಿನಿಗೆ ಕರೆತಂದು ಅವರ ಪ್ರತಿಭೆಗಳಿಗೆ ಶಕ್ತಿ ತುಂಬಬೇಕಾಗಿದೆ. ವನವಾಸಿ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿ ನೀಡಿ ಅವರನ್ನು ಗುರುತಿಸಿ ಅವಕಾಶ ಕಲ್ಪಿಸುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ವನವಾಸಿ ಕಲ್ಯಾಣ ಸಮಿತಿ ಕಾರ್ಯಪ್ರವರ್ತವಾಗಿ ಭಾರತದ ಪಾರಂಪರಿಕ ಬಿಲ್ಲು ವಿದ್ಯೆ ಶಿಕ್ಷಣವನ್ನು ದೇಶದ ಹಲವು ರಾಜ್ಯಗಳಲ್ಲಿ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಎರಡು ದಿನಗಳು ನಡೆಯುವ ರಾಜ್ಯ ಮಟ್ಟದ ಬಿಲ್ಲುಗಾರಿಕೆ ಮತ್ತು ವಿನೂತನ ಖೋ ಖೋ ಸ್ಪರ್ಧೆಯಲ್ಲಿ ಕೊಡಗು, ಮೈಸೂರು, ಚಾಮರಾಜನಗರ, ಶಿರಸಿ, ಕಾರವಾರ, ಬೆಳಗಾವಿ, ರಾಮನಗರ, ಶಿವಮೊಗ್ಗ, ಯಾದಗಿರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ, ಬೀದರ್ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಸುಮಾರು 330 ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಲಿದ್ದಾರೆ. ನಂತರ ಇಲ್ಲಿ ವಿಜೇತರಾದ ಕ್ರೀಡಾಪಟುಗಳು ಭೂಪಾಲ್‍ನಲ್ಲಿ ನಡೆಯುವ ಅಂತರ್‍ರಾಷ್ಟ್ರೀಯ ಮಟ್ಟದ ಕ್ರೀಡೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ತಾ.ಪಂ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಸದಸ್ಯರುಗಳಾದ ಕುಟ್ಟಂಡ ಅಜಿತ್ ಕರುಂಬಯ್ಯ, ಯರವರ ಪ್ರಕಾಶ್, ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ವನವಾಸಿ ಕಲ್ಯಾಣ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಪಿ. ಸಿದ್ದ, ಕಾರ್ಯದರ್ಶಿ ಪ್ರಭುಕುಮಾರ್, ಡಾ|| ಶಿವಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಚಕ್ಕೇರ ಮನು, ಪ್ರಮುಖರಾದ ಮನು ನಂಜಪ್ಪ, ಗಾನಂಗಡ ಬೋಪಯ್ಯ, ತರಬೇತುದಾರ ಪ್ರಭುನಂದನ್ ಜೀ, ವಿದ್ಯಾನಂದ ಡಿ ಉಪಸ್ಥಿತರಿದ್ದರು.

-ಚಿತ್ರ, ವರದಿ : ಎನ್.ಎನ್. ದಿನೇಶ್