ಸೋಮವಾರಪೇಟೆ, ಅ. 14: ಹೇಮಾವತಿ ಹಿನ್ನೀರು ಪ್ರದೇಶದ ಶೀತಪೀಡಿತ ಜಾಗದಲ್ಲಿರುವ ಕುಟುಂಬ ಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕಳೆದ 27 ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಸ್ಥಳೀಯರು ವಿಧಾನ ಸೌಧದೆದುರು ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಬೆಸೂರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾವಿನಹಳ್ಳಿ, ಜನಾರ್ಧನಹಳ್ಳಿ ಮತ್ತು ಮಾಗಡಹಳ್ಳಿ ಗ್ರಾಮವು ಹೇಮಾವತಿ ಹಿನ್ನೀರು ಮುಳುಗಡೆ ಪ್ರದೇಶವಾಗಿದ್ದು, ಈ ಗ್ರಾಮವನ್ನು ಸ್ಥಳಾಂತರಿಸುವಂತೆ 1990 ರಿಂದಲೇ ಹೋರಾಟವನ್ನು ನಡೆಸುತ್ತಾ ಬಂದಿದ್ದರೂ ಯಾವದೇ ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಜೆ.ಆರ್. ಹೊನ್ನಪ್ಪ ಅವರು, ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಯಾವದೇ ಪರಿಹಾರವೂ ದೊರೆತಿಲ್ಲ. ಸವiಸ್ಯೆ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜಿಲ್ಲಾಧಿಕಾರಿಗಳು, ಶಾಸಕರ ಗಮನ ಸೆಳೆಯಲಾಗುವದು. ಇದಕ್ಕೂ ಸ್ಪಂದನೆ ದೊರಕದಿದ್ದರೆ ವಿಧಾನಸೌಧದ ಎದುರು ಈ ಭಾಗದ 60 ಕುಟುಂಬ ಗಳು ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದರು. ಕರ್ನಾಟಕ ಸರಕಾರದಿಂದ ನೇಮಿಸಲ್ಪಟ್ಟ ಉನ್ನತ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ನೀರುಗುಂದ ಗ್ರಾಮದ ಸರ್ವೆ ನಂಬರ್ 34/1 ರಲ್ಲಿ ಈ ಹಿಂದೆ ಜಾಗ ಗುರುತಿಸಿ ಹಿನ್ನೀರು ಮುಳುಗಡೆ ಸಂತ್ರಸ್ಥರಿಗೆ ಸುಮಾರು ಆರು ಮುಕ್ಕಾಲು ಏಕರೆ ಜಾಗವನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರು. ತದನಂತರ ಸರಕಾರದ 4 ಸಮಿತಿಗಳು ಮುಳುಗಡೆ ಸಂತ್ರಸ್ಥರನ್ನು ಸ್ಥಳಾಂತರಿಸಿ ಸೌಲಭ್ಯ ಕಲ್ಪಿಸುವಂತೆ ಶಿಫಾರಸ್ಸು ಮಾಡಿದ್ದರೂ ಜಾರಿಗೆ ತರುವಲ್ಲಿ ಯಾವದೇ ಸರಕಾರಗಳು ಪ್ರಯತ್ನಿಸಲಿಲ್ಲ ಎಂದು ಆರೋಪಿಸಿದರು. ಸುಮಾರು 300ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮವು ಶೀತ ಪ್ರದೇಶವಾಗಿದ್ದು, ಈಗಾಗಲೇ ರಾಜ್ಯದ ಮುಖ್ಯ ಮಂತ್ರಿಗಳು, ಜಲಸಂಪನ್ಮೂಲ ಇಲಾಖೆ ಅಭಿಯಂತರರು, ಕ್ಷೇತ್ರದ ಶಾಸಕರು ಹಾಗೂ ಭರವಸೆ ಸಮಿತಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವದೇ ಪರಿಹಾರ ದೊರಕದ ಹಿನ್ನೆಲೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರ ಕಚೇರಿ ಎದುರು ಧರಣಿ ನಡೆಸ ಲಾಗುವದು. ಇದಕ್ಕೂ ಸ್ಪಂಧಿಸದಿದ್ದಲ್ಲಿ ವಿಧಾನ ಸೌಧದ ಎದುರು ಧರಣಿ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು. ಮುಂದಿನ 15 ದಿನಗಳ ಒಳಗೆ ಜಿಲ್ಲಾಧಿಕಾರಿಗಳು ಸ್ಥಳಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ ಹೊನ್ನಪ್ಪ, ಗ್ರಾಮದ ಜನಾರ್ಧನ ಹಳ್ಳಿ, ನೀರುಗುಂದ, ಶಿವಪುರ, ಮಾಗಡಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶಾಲಾ-ಕಾಲೇಜಿನ ವಾಹನಗಳು ತೆರಳಲು ಅಸಾಧ್ಯವಾದ ಹಿನ್ನೆಲೆ ಹಲವು ಮಕ್ಕಳು ಶಾಲೆಯಿಂದ ಹೊರಗುಳಿಯು ವಂತಾಗಿದೆ. ತಕ್ಷಣ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಗ್ರಾಮಸ್ಥರಾದ ಜೆ.ಸಿ. ನಾರಾಯಣ, ಜೆ.ಹೆಚ್. ತ್ಯಾಗರಾಜ್, ಜೆ.ಹೆಚ್. ನಟರಾಜ್, ಜೆ.ಎ. ಕೃಷ್ಣೇಗೌಡ ಉಪಸ್ಥಿತರಿದ್ದರು.