ಗೋಣಿಕೊಪ್ಪಲು,ಅ.13: ಇಬ್ಬರು ಕೊಡವ ಯುವಕರು ನಾಯಕ ನಟರಾಗಿ ನಟಿಸಿದ ಕನ್ನಡ ಚಿತ್ರ ‘ಏಪ್ರೀಲ್‍ನ ಹಿಮಬಿಂದು’ ಇಂದು ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ಯವಕಪಾಡಿ ಹಾಗೂ ದ.ಕೊಡಗಿನ ತೆರಾಲು ಗ್ರಾಮದ ಯುವಕರು ಮೊದಲ ಬಾರಿಗೆ ಬೆಳ್ಳಿಪರದೆಯ ಮೇಲೆ ಮೂಡಿ ಬಂದಿದ್ದಾರೆ.

ಕನ್ನಡ ಸಿನೆಮಾರಂಗದಲ್ಲಿ ಕೊಡವ ಯುವತಿಯರಾದ ಪ್ರೇಮಾ, ಡೈಸಿ ಬೋಪಣ್ಣ,ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ,ಶ್ವೇತಾ ಚಂಗಪ್ಪ ಒಳಗೊಂಡಂತೆ ಏಳು ಎಂಟು ನಟಿಯರು ಮಾತ್ರ ನಾಯಕಿಯರಾಗಿ ಒಂದಷ್ಟು ಯಶಸ್ಸನ್ನು ಕಂಡಿದ್ದರೆ, ಕನಿಷ್ಟ 5ಕ್ಕೂ ಕಡಿಮೆ ಕೊಡವ ಯುವಕರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಒಂದೇ ಚಿತ್ರದಲ್ಲಿ ಇಬ್ಬರು ಕೊಡವ ಯುವಕರು ಕನ್ನಡ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವದು ಇದೇ ಮೊದಲು. ಈ ನಿಟ್ಟಿನಲ್ಲಿ ‘ರಿಂಗ್ ರೋಡ್ ಶುಭಾ’ ಚಿತ್ರದಲ್ಲಿ ನಟಿಸಿದ್ದ ಕಕ್ಕಬ್ಬೆ ಯವಕಪಾಡಿಯ ಯುವಕ ಅಪ್ಪಾರಂಡ ಸಚಿನ್ ತಿಮ್ಮಯ್ಯ ಹಾಗೂ ಬಿರುನಾಣಿ ಸಮೀಪ ತೆರಾಲು ಗ್ರಾಮದ ಬೊಳ್ಳೇರ ಗಣೇಶ್ ಮುತ್ತಣ್ಣ ‘ನಮ್ಮನ್ನು ಪೆÇ್ರೀತ್ಸಾಹಿಸಿ’ ಎಂದು ‘ಶಕ್ತಿ’ ಮೂಲಕ ಮನವಿ ಮಾಡಿದ್ದಾರೆ.

ಸುಮಾರು 2.10 ಗಂಟೆ ಸಿನೆಮಾದಲ್ಲಿ ಪ್ರಬುದ್ಧತೆಯ ಕೊರತೆಯನ್ನೆದುರಿಸುವ ಯುವ ಜನಾಂಗದ ಚಿತ್ರಣವಿದೆ. ಒಟ್ಟಿನಲ್ಲಿ ‘ಇಲ್ಲದರ ಹುಡುಕಾಟವೇ’ ಇಲ್ಲಿ ಕಥಾವಸ್ತು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಬ್ಯೂಟಿಫುಲ್ ಮನಸ್ಸುಗಳು ಚಿತ್ರಕ್ಕೆ ಸಂಗೀತ ನೀಡಿರುವ ಭರತ್ ಬಿ.ಜೆ. ಅವರ ಸಂಗೀತಾ, ಯೋಗರಾಜ್ ಭಟ್, ರಘು ದೀಕ್ಷಿತ್, ನಾಗೇಂದ್ರ ಪ್ರಸಾದ್, ವಿಜಯಪ್ರಕಾಶ್ ಇವರಿಂದ ಮೂಡಿ ಬಂದ ಮೂರು ಗೀತೆಗಳು, ಸಂಗೀತ ಕಟ್ಟಿ ಕಂಠ ಸಿರಿಯೂ ಇದೆ. ಡಾ.ಹೆಚ್.ಎಸ್.ವೆಂಕಟೇಶ್‍ಮೂರ್ತಿ ಕವನಕ್ಕೂ ಇಲ್ಲಿ ಸ್ಥಾನ ನೀಡಲಾಗಿದೆ.

ಹಿರಿಯ ನಟ 63 ವರ್ಷದ ದತ್ತಣ್ಣ ಇಲ್ಲಿ ಮಗನ ಪಾತ್ರ ಮಾಡಿದ್ದಾರೆ. ಇವರ ತಂದೆಯ ಪಾತ್ರದಲ್ಲಿ ಇವರ ಸಹೋದರ ಸೋಮಶೇಖರ್ ನಟಿಸಿದ್ದಾರೆ. ನಿನಾಸಂ ತಂಡದ ಪ್ರತಿಭೆಗಳಾದ ಕಿರುತೆರೆ ನಟಿಯರಾದ ಚಂದನಾ, ಸ್ಪಂದನಾ ಹಾಗೂ ಶ್ವೇತಾ ಇಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಮೂವರು ನಾಯಕರು, ಮೂವರು ನಾಯಕಿಯರು ನಟಿಸಿರುವ ಚಿತ್ರದಲ್ಲಿ ಬೊಳ್ಳೇರ ಗಣೇಶ್ ಮುತ್ತಣ್ಣ, ಅಪ್ಪಾರಂಡ ಸಚಿನ್ ತಿಮ್ಮಯ್ಯ ಅವರೊಂದಿಗೆ ಪಾಪ ಪಾಂಡು ಖ್ಯಾತಿಯ ಚಿದಾನಂದ್ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಲಿಂಗು ಶ್ರೀಧರ್, ಬಾಬಾ ಹಿರಣ್ಣಯ್ಯ ಅವರ ಹಾಸ್ಯವೂ ಚಿತ್ರದಲ್ಲಿದೆ. ಶಿವ ಜಗನ್ ಅಂಡ್ ಅಸೋಸಿಯೇಟ್ ನಿರ್ಮಾಣದಲ್ಲಿ ಶಿವ ಜಗನ್ ಅವರ ನಿರ್ದೇಶನವಿದ್ದು, ಅನೂಪ್ ಹಾಗೂ ಸಂದೀಪ್ ಸಹ ನಿರ್ಮಾಪಕರಾಗಿದ್ದಾರೆ.

ಕೊಡಗಿನ ಯುವಕರ ಬಗ್ಗೆ

ಕಕ್ಕಬ್ಬೆ-ಯವಕಪಾಡಿಯ ದಿ. ಸುಬ್ರಮಣಿ-ಭವಾನಿ ದಂಪತಿಗಳ ಏಕೈಕ ಪುತ್ರ ಅಪ್ಪಾರಂಡ ಸಚಿನ್ ತಿಮ್ಮಯ್ಯಗೆ ಇಬ್ಬರು ಸಹೋದರಿಯರು. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಬೆಂಗಳೂರಿನಲ್ಲಿ ತರಬೇತಿ ಹೊಂದಿ ದೇಶಾದ್ಯಂತ ನಾಟಕ ಪ್ರದರ್ಶನ( ಮಹಾ ಮಸ್ತಕಾಭಿಷೇಕ) ನೀಡಿದ್ದಾರೆ. ಬದುಕು, ಮೊಗ್ಗಿನ ಮನಸ್ಸು, ತ್ರಿವೇಣಿ ಸಂಗಮ ಇತ್ಯಾದಿ 7 ಧಾರಾವಾಹಿಗಳಲ್ಲಿ ನಟನೆ ಮಾಡಿರುವ ಸಚಿನ್ ತಿಮ್ಮಯ್ಯಗೆ ಹಿಮಬಿಂದು ಮೊದಲ ಸಿನೆಮಾ. ಬೆಂಗಳೂರಿನಲ್ಲಿ ವಾಸ್ತವ್ಯ.

ಮತ್ತೋರ್ವ ನಟ ಬೊಳ್ಳೇರ ಗಣೇಶ್ ಮುತ್ತಣ್ಣ ಎಕೈಡ್ ಕಂಪನಿಯಲ್ಲಿ ಕಳೆದ 15 ವರ್ಷದಿಂದ ಪ್ರಧಾನ ವ್ಯವಸ್ಥಾಪಕರಾಗಿ ಉದ್ಯೋಗದಲ್ಲಿದ್ದು, ತೆರಾಲು ಗ್ರಾಮದ ಬೊಳ್ಳೇರ ಮುತ್ತಣ್ಣರಾಮು, ಲೀಲಾವತಿ ಕಮಲ ದಂಪತಿಯ ಪುತ್ರ. ಎಂಬಿಎ ಓದಿರುವ ಗಣೇಶ್ ‘ಡ್ರಾಮಾ ಟ್ರೂಪ್’ ನಲ್ಲಿ ನಿರಂತರ ತೊಡಗಿಸಿಕೊಂಡಿದ್ದು ಇದು ಪ್ರಥಮ ಚಿತ್ರ.

- ಟಿ.ಎಲ್.ಶ್ರೀನಿವಾಸ್