ಮಡಿಕೇರಿ, ಅ. 15: ಸರ್ಕಾರವು ಅನುದಾನಿತ ಮತ್ತು ಸರ್ಕಾರಿ ನೌಕರರ ಕುರಿತು ತಾರತಮ್ಯ ನೀತಿ ಅನುಸರಿಸುತ್ತಿದ್ದು ಅನುದಾನಿತ ಸಂಸ್ಥೆಗಳ ನೌಕರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಇದು ಖಂಡನೀಯ, ಅನುದಾನಿತ ನೌಕರರನ್ನು ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಹನುಮಂತಪ್ಪ ಹಾವೇರಿ ಆಗ್ರಹಿಸಿದರು.
ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ಪಿಂಚಣಿ ವಂಚಿತ ನೌಕರರ ಜಿಲ್ಲಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 1964 ರಲ್ಲಿ ರಾಜ್ಯ ಸರಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತ್ತು. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ತೀರಾ ಕುಸಿದಿದ್ದ ಕಾಲದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದ್ದ ಅಮೋಘ ಕೊಡುಗೆಯನ್ನು ಮನ್ನಿಸಿ ಈ ಹಿಂದೆ ಪಿಂಚಣಿ ವ್ಯವಸ್ಥೆ ಜಾರಿಜೊಳಿಸಿದ್ದು 2006 ರ ಏಪ್ರಿಲ್ 1 ರಿಂದ ನಿಲುಗಡೆಗೊಳಿಸಿದೆ. ಬಳಿಕ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ಅನುದಾನಿತ ನೌಕರರಿಗೆ ಅದನ್ನೂ ಜಾರಿಗೊಳಿಸದೆ ತಾರತಮ್ಯ ನೀತಿ ಅನುಸರಿಸುತ್ತಿದೆ. 2006 ರ ಬಳಿಕ ನೇಮಕಾತಿ ಹೊಂದುತ್ತಿರುವ ಅನುದಾನಿತ ನೌಕರರು ಸೇವೆಯ ಕೊನೆಯ ತಿಂಗಳ ವೇತನವನ್ನು ಪಡೆದು ಬರಿಗೈಯಲ್ಲಿ ನಿವೃತ್ತ ಜೀವನವನ್ನು ನಡೆಸಬೇಕಾದ ಸ್ಥಿತಿ ಎದುರಾಗಿದೆ. ಇದನ್ನು ಕೊನೆಗಾಣಿಸುವ ಉದ್ದೇಶಕ್ಕಾಗಿ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘವನ್ನು 2009 ರಲ್ಲಿ ಸ್ಥಾಪಿಸಿದ್ದು ಕೆಲವು ಸ್ಥಾಪಿತ ಹಿತಾಸಕ್ತಿಗಳು ನೌಕರರಿಗೆ ನ್ಯಾಯವನ್ನು ಒದಗಿಸಲು ತಡೆಯೊಡ್ಡುತ್ತಿವೆ. ಆದ್ದರಿಂದ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಶಿಕ್ಷಕರನ್ನು ಸಂಘಟಿಸುತ್ತಿದ್ದು ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ ಎಂದರು.
ಸಮಾವೇಶವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಕೆ ಮಂಜುನಾಥ ಕುಮಾರ್ ಅತಂತ್ರ ಜೀವನಕ್ಕೆ ನೌಕರರನ್ನು ದೂಡಿರುವ ಸರ್ಕಾರ ‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ಸಾಂವಿಧಾನಿಕ ನೀತಿಗೆ ತಿಲಾಂಜಲಿ ಇತ್ತಿದೆ, ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಅನುದಾನಿತ ನೌಕರರ ಬಗ್ಗೆ ಸರ್ಕಾರದ ಧೋರಣೆಯು ಏರಿದ ಏಣಿಯನ್ನೇ ತುಳಿಯುವ ಪ್ರವೃತ್ತಿಯಾಗಿದೆ ಎಂದು ಟೀಕಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನೈಋತ್ಯ ಪತ್ರಿಕೆಯ ಸಂಪಾದಕ ಡಾ.ಅರುಣ್ ಹೊಸಕೊಪ್ಪ ಹಿಂದೆ ಶಿಕ್ಷಕ ವೃತ್ತಿಯಲ್ಲಿ ನೆಮ್ಮದಿ ಇದೆಯೆಂದು ತಿಳಿಯುತ್ತಿದ್ದರು. ನೆಮ್ಮದಿಗಾಗಿ ಆರ್ಥಿಕ ಲಾಭದ ನೌಕರಿ ಬಿಟ್ಟು ಬರುತ್ತಿದ್ದರು. ಆದರೆ ಇಂದು ಶಿಕ್ಷಕರನ್ನು ಹಲವು ಗೊಂದಲಗಳಿಗೆ ದೂಡಿರುವದಲ್ಲದೆ ಪಿಂಚಣಿಯನ್ನು ನಿಲ್ಲಿಸಿ ಮಾನಸಿಕ ಒತ್ತಡವನ್ನೇ ಸೃಷ್ಟಿಸಲಾಗಿದೆ ಎಂದರು.
ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಶೆಟ್ಟಿಗಾರ್, ಹಾಸನ ಜಿಲ್ಲಾ ಸಿ. ನವೀನ್ ಕುಮಾರ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಿ.ಟಿ. ಸೋಮಶೇಖರ್, ಮೆಹಬೂಬ್ ಸಾಬ್, ಅನುದಾನಿತ ನೌಕರರ ಸಂಘದ ಡಿ.ಎ.ಮೋಹನ್ ಉಪಸ್ಥಿತರಿದ್ದರು. ಸಂಚಾಲಕ ಪಿ.ಎಸ್. ರವಿಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡಗು ಜಿಲ್ಲಾ ಘಟಕದ ರಚನೆ ಜರುಗಿತು. ಜಿಲ್ಲಾ ಗೌರವಾಧ್ಯಕ್ಷ ಬಿ. ಸಿದ್ದರಾಜು ಜಿಲ್ಲಾಧ್ಯಕ್ಷ ಪಿ.ಎಸ್. ರವಿಕೃಷ್ಣ, ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಪಿ. ಪರಮೇಶ್ ಆಯ್ಕೆಗೊಂಡರು.
ಯು. ಸುನಂದ ಪ್ರಾರ್ಥಿಸಿ ಬಿ.ಸಿದ್ದರಾಜು ಸ್ವಾಗತಿಸಿದರು. ಹೆಚ್.ಜಿ. ಕುಮಾರ್ ನಿರೂಪಿಸಿ ಕೆ.ಪಿ. ಜಯಕುಮಾರ್ ವಂದಿಸಿದರು.