ಮಡಿಕೇರಿ, ಅ. 15: ಅಮೇರಿಕದ ವಿಜ್ಞಾನ ಹಾಗೂ ಆಧ್ಯಾತ್ಮ ಪ್ರಯೋಗಾಲಯದಲ್ಲಿ ಪರಿಶೀಲಿಸಲ್ಪಟ್ಟ ಕಾವೇರಿ ತೀರ್ಥವು ‘‘ಜಾಗೃತ ಶಕ್ತಿ’’ ತುಂಬಿದ್ದು, ಜೀವಿಗಳ ಮಾನಸಿಕ ಹಾಗೂ ದೈಹಿಕ ಕ್ಷೋಭೆಗಳನ್ನು ಪರಿಹರಿಸಬಲ್ಲ ಅದ್ಭುತ ಶಕ್ತಿ ಹೊಂದಿದೆ ಎಂದು ಇನ್‍ಸ್ಟಿಟ್ಯೂಟ್ ಫಾರ್ ಸೈನ್ಸ್, ಸ್ಪಿರಿಚ್ವಾಲಿಟಿ ಮತ್ತು ಸಸ್ಪೈನೆಬಿಲಿಟಿಯ ಅಧ್ಯಕ್ಷ, ಹಿರಿಯ ವಿಜ್ಞಾನಿ ಡಾ. ಬಿದ್ದಂಡ ಪಿ. ಕೃಷ್ಣ ಮಾದಪ್ಪ ಹೇಳಿದ್ದಾರೆ.ಇತ್ತೀಚೆಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ವಿಶ್ವ ಪ್ರಯೋಗಾಲಯದಲ್ಲಿ ಪ್ರಪಂಚದ ಮುಖ್ಯ ನದಿ, ಸಮುದ್ರ ಹಾಗೂ ಪ್ರಕೃತಿಯ ಕುರಿತು ಹಲವು ದಶಕಗಳಿಂದ ಆಧುನೀಕೃತ ವ್ಯವಸ್ಥೆಯಡಿ ಸಂಶೋಧನೆ ಮತ್ತು ಪ್ರಯೋಗಗಳು ನಡೆಯುತ್ತಿದ್ದು, ತಾವು 2012ರಲ್ಲಿ ಕಾವೇರಿ ತೀರ್ಥೋದ್ಭವ ನಡೆದು ವಾರದ ಬಳಿಕ ಖುದ್ದಾಗಿ ಬಂದು ತೀರ್ಥವನ್ನು ಸಂಶೋಧನೆಗೆ ಕೊಂಡೊಯ್ದುದಾಗಿ ತಿಳಿಸಿದರು.

ಕಾವೇರಿ ತೀರ್ಥಕ್ಕೆ ಅದ್ಭುತ ಆಧ್ಯಾತ್ಮಿಕ ಶಕ್ತಿ ಇದೆ ಎಂದು ಹೇಳಿದ ಅವರು,

(ಮೊದಲ ಪುಟದಿಂದ) ದಕ್ಷಿಣದ ಗಂಗೆ ಕಾವೇರಿ ಕೊಡಗಿನಲ್ಲಿ ಹರಿಯುವದು ಪುಣ್ಯದ ಫಲ ಎಂದರು. ಮಾನವನು ಭಕ್ತಿ ಹಾಗೂ ಶರಣಾಗತಿಯಿಂದ ಪ್ರಾರ್ಥಿಸಿದರೆ, ಪ್ರತಿಕ್ರಿಯಿಸುವ ಗುಣ ಹೊಂದಿರುವ ಕಾವೇರಿ ಪ್ರತಿಫಲ ನೀಡುತ್ತಾಳೆ ಎಂದು ತಮ್ಮ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ತಿಳುವಳಿಕೆ ಮತ್ತು ಅನುಭವದಿಂದ ಮಾತನಾಡುವ ಕೃಷ್ಣ ಮಾದಪ್ಪ, ನಂಬಿಕೆ ಇಲ್ಲದಿದ್ದರೆ ಆಧ್ಯಾತ್ಮಿಕ ತರಂಗ ಪ್ರವಹಿಸದು ಎಂದು ಹೇಳಿದರು. ನೀರಿನಲ್ಲಿರುವ ಚೈತನ್ಯ ಗುಣವು ಬಾಹ್ಯ ಕಲ್ಮಷದಿಂದ ಹಾಳಾಗದು. ಆದರೆ ಮಾನಸಿಕವಾಗಿ ಅಪನಂಬಿಕೆ ಹೊಂದಿದರೆ ಮನಸ್ಸು ಮತ್ತು ಪ್ರಜ್ಞೆಗಳ ಸಂಗಮವಾಗದು. ನೀರಿನ ಚೈತನ್ಯ ಉಪಯೋಗಕ್ಕೆ ಬಾರದು ಎಂದರು.

ಋಷಿಮುನಿಗಳು ಪವಿತ್ರ ತೀರ್ಥಗಳು ಹಾಗೂ ಜೀವಿಗಳ ಬದುಕು ಮತ್ತು ಜೀವನಕ್ಕೆ ಅವಿನಾಭಾವ ಸಂಬಂಧ ಇರುವ ಕುರಿತು ಹೇಳಿದ್ದು, ಆ ಮಾತು ಕಾವೇರಿ ತೀರ್ಥವನ್ನು ಪ್ರಯೋಗಕ್ಕೆ ಅಳವಡಿಸಿ ಅದು ಹೊಂದಿರುವ ವಿಶಿಷ್ಟ ವೈಜ್ಞಾನಿಕ ಚೈತನ್ಯವನ್ನು ಗಮನಿಸಿ ದಾಗ ಸತ್ಯ ಎಂದು ಮನವರಿಕೆ ಯಾಗುತ್ತದೆ ಎಂದು ಹೇಳಿದರು. ವಿಶ್ವದ ಆಯ್ದ ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಭಾಗಿಗಳಾಗಿದ್ದು, ನೀರಿಗೂ ಮಾನವನ ಮನಸ್ಸಿನಂತೆ ವಿವೇಕ, ಪ್ರತಿಕ್ರಿಯೆ, ತೀರ್ಮಾನಗಳ ಸ್ವಭಾವ ಇರುವದು ಸ್ಪಷ್ಟಗೊಂಡಿದೆ ಎಂದರು.

ಈ ಪ್ರಯೋಗಗಳಿಂದ ಮಾನವ, ಪ್ರಕೃತಿ, ಪ್ರಜ್ಞೆಯ ನಡುವೆ ಅವಿನಾಭಾವ ಸಂಬಂಧವಿರುವದು ಸ್ಪಷ್ಟವಾಗಿ ಗೋಚರಿಸಿದೆ ಎಂದರು.