ಸಿದ್ದಾಪುರ, ಅ. 15: ಮುಂದಿನ ಬಾರಿ ರಾಜ್ಯದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದರು.
ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ಸಭಾಂಗಣದಲ್ಲಿ ಹಾಗೂ ಸಿದ್ದಾಪುರ ಬಸ್ಸ್ ನಿಲ್ದಾಣದಲ್ಲಿ ನಡೆದ ಬಿ.ಜೆ.ಪಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಬಿ.ಜೆ.ಪಿ ಆಡಳಿತ ನಡೆಸುವ ಸಂದರ್ಭ ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ಬಡವರ ಪರ ಹಲವಾರು ಯೋಜನೆಗಳನ್ನು ತಂದಿದ್ದು, ಕೊಡಗು ಜಿಲ್ಲೆಯ ಈರ್ವರು ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ ಹಿನ್ನೆಲೆಯಲ್ಲಿ ಈ ಬಾರಿ ಬಿ.ಜೆ.ಪಿ ಆಡಳಿತಕ್ಕೆ ಬರುವದು ಖಚಿತ ಎಂದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಬಿ.ಜೆ.ಪಿ ಸರಕಾರವು ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಂದರ್ಭ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸಿ ಗ್ರಾಮೀಣ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಮಾಡಿದೆ. ಜಿ.ಪಂ, ತಾ.ಪಂ. ಸೇರಿದಂತೆ ಗ್ರಾ.ಪಂ. ಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿತ್ತು ಎಂದರು.
ಶಾಸಕ ಕೆ,ಜಿ ಬೋಪಯ್ಯ ಮಾತನಾಡಿ, ಪಕ್ಷವನ್ನು ಸಂಘಟನೆ ಮಾಡುವ ಉದ್ದೇಶದಿಂದ ಜಿಲ್ಲಾಧ್ಯಂತ ಪಕ್ಷದ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದ್ದು, ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿ ಸೇವೆಯನ್ನು ಸಲ್ಲಿಸಬೇಕು ಎಂದರು. ಮೋದಿ ಸರಕಾರ ಅಧಿಕಾರದಲ್ಲಿ ಬಂದ ಬಳಿಕ ಡೀಸೆಲ್ ಹಾಗೂ ಪೆಟ್ರೋಲ್ ದರ ಇಳಿಕೆಯಾಗಿದೆ. ಜನ ಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಜಿಲ್ಲೆಗೆ ಸಿದ್ದರಾಮಯ್ಯರವರ ಕೊಡುಗೆ ಟಿಪ್ಪು ಜಯಂತಿ ಮಾತ್ರವಾಗಿದೆ. ಅಭಿವೃದ್ಧಿಯಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಪ್ರಾಸ್ತಾವಿಕ ಮಾತನಾಡಿದ ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಲೊಕೇಶ್ ನವೆಂಬರ್ 2 ರಂದು ಬೆಂಗಳೂರಿನಲ್ಲಿ ಬಿ.ಜೆ.ಪಿ ವತಿಯಿಂದ ಪರಿವರ್ತನಾ ರ್ಯಾಲಿ ನಡೆಯಲಿದ್ದು, ರ್ಯಾಲಿಗೆ ಪ್ರಧಾನಿ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಗವಹಿಸಲಿದ್ದು, ಜಿಲ್ಲೆಯಿಂದ ಕಾರ್ಯಕರ್ತರು ಬೈಕ್ ಮೂಲಕ ತೆರಳಲಿದ್ದಾರೆ ಎಂದರು.
ಈ ಸಂದರ್ಭ ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ನೆಲ್ಯಹುದಿಕೇರಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಾಜಿ, ಸಿದ್ದಾಪುರ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಡಿ ನಾಣಯ್ಯ, ಮುಖಂಡರಾದ ಪಾಲಚಂಡ ಚೀಯಣ್ಣ, ವಸಂತ ಕುಮಾರ್ ಹೊಸಮನೆ, ಪಿ.ಸಿ ಅಚ್ಚಯ್ಯ, ತಾ.ಪಂ ಸದಸ್ಯ ಜನೀಶ್, ಪ್ರಭಾಕರ್, ಸೇರಿದಂತೆ ಇನ್ನಿತರರು ಇದ್ದರು.