ಸೋಮವಾರಪೇಟೆ, ಅ. 15: ಭಾಷಣಗಳ ಬದಲಿಗೆ ಪ್ರತಿಯೊಬ್ಬರೂ ತಮ್ಮ ಮನದಲ್ಲಿ ಭಾವೈಕ್ಯತೆಯ ಭಾವವನ್ನು ಮೂಡಿಸಿಕೊಳ್ಳಬೇಕು. ಆಗ ಮಾತ್ರ ಬಾಂಧವ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಸಕಲೇಶಪುರದ ಆನೆಮಹಲ್ನ ಧರ್ಮಗುರು ಕೆ.ಎಂ. ಇಬ್ರಾಹಿಂ ಮುಸ್ಲಿಯಾರ್ ಅಭಿಪ್ರಾಯಿಸಿದರು.
ಸೋಮವಾರಪೇಟೆಯ ಮಲಂಗ್ ಷಾ ವಲಿ ಯೂತ್ ಕಮಿಟಿ ವತಿಯಿಂದ ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ 5ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಭಾವೈಕ್ಯತಾ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಾನವರೆಲ್ಲರೂ ಒಂದೇ. ಎಲ್ಲರಿಗೂ ಗೌರವ ನೀಡುವ ಮೂಲಕ ನಾವುಗಳೂ ಗೌರವ ಪಡೆಯಬೇಕು. ಆಡಂಬರ, ಆಧುನಿಕತೆ ಮೇಳೈಸುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ದಿನ ನಿತ್ಯದ ಸಂಪಾದನೆಯ ಕೆಲವು ಭಾಗವನ್ನಾದರೂ ನಿರ್ಗತಿಕರ, ಶೋಷಿತರ ಸೇವೆಗೆ ಮುಡಿಪಾಗಿಡ ಬೇಕು. ವರದಕ್ಷಿಣೆ, ಭ್ರೂಣಹತ್ಯೆ ಯಂತಹ ಸಾಮಾಜಿಕ ಪಿಡುಗುಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಉಚಿತ ಸಾಮಾಹಿಕ ವಿವಾಹದಂತಹ ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಇಲ್ಲಿನ ಜಯವೀರ ಮಾತೆ ಚರ್ಚ್ನ ಧರ್ಮಗುರು ಟೆನ್ನಿ ಕುರಿಯನ್ ಮಾತನಾಡಿ, ಯಾವದೇ ಧರ್ಮವೂ ಅನ್ಯಾಯ, ಮೋಸ, ಅನಾಚಾರವನ್ನು ಭೋದಿಸುವದಿಲ್ಲ. ಪ್ರತಿಯೊಬ್ಬರಿಗೂ ಅವರವರ ಧರ್ಮದ ಅರಿವು ಅಗತ್ಯ. ಎಲ್ಲಾ ಧರ್ಮದ ಸಾರ ಒಂದೇ ಆಗಿದ್ದು, ಪ್ರತಿಯೊಬ್ಬರೂ ಮಾನವೀಯತೆಯನ್ನು ಮೈಗೂಢಿಸಿ ಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇಲ್ಲಿನ ಮಲಂಗ್ ಷಾವಲಿ ಯೂತ್ ಕಮಿಟಿ ಅಧ್ಯಕ್ಷ ಡಿ.ಕೆ.ಅಬ್ದುಲ್ ಅಜೀಜ್ ಮಾತನಾಡಿ, ಮಲಂಗ್ ಷಾ ವಲಿ ಯೂತ್ ಕಮಿಟಿ ಅನಾಥರು ಹಾಗೂ ನಿರ್ಗತಿಕರ ಸೇವಾ ಸಂಸ್ಥೆಯಾಗಿದ್ದು, ಐದು ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಣಕ್ಕಾಡ್ ಧರ್ಮಗುರು ಸಯ್ಯದ್ ಸಮೀರ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಕೆ.ಪಿ. ಷಂಶುದ್ದೀನ್, ನೆಲ್ಲಿಹುದಿಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಕೆ. ಹಕಿಂ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಕಲ್ಕಂದೂರು ಮತ್ತು ಬಜೆಗುಂಡಿ ಮಸೀದಿಯ ಧರ್ಮಗುರುಗಳು ಉಪಸ್ಥಿತರಿದ್ದರು.