ಮಡಿಕೇರಿ, ಅ. 15: ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿಯತ್ತ ಸಾಗಲು ತೆರಿಗೆಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಿನ ಬಿಲ್ಲು, ಮಳಿಗೆ ತೆರಿಗೆ ಹಾಗೂ ಬಾಡಿಗೆಯನ್ನು ಸಕಾಲದಲ್ಲಿ ಪಾವತಿಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ನೀರಿನ ಬಿಲ್ ಪ್ರತಿ ತಿಂಗಳು ಸರಿಯಾಗಿ ಸಂಗ್ರಹಣೆ ಮಾಡಬೇಕು. ಅಧಿಕಾರಿಗಳು ಬಡವರಿಗೆ ಮತ್ತು ಸ್ಲಂ ನಿವಾಸಿಗಳಿಗೆ ತೊಂದರೆ ನೀಡದೆ, ಕಾಲಾವಕಾಶ ನೀಡಿ ತೆರಿಗೆ ಸಂಗ್ರಹಣೆ ಮಾಡಬೇಕು. ಹಿಂದಿನ ವರ್ಷದ ತೆರಿಗೆಗಳು ಹಾಗೆಯೇ ಬಾಕಿ ಉಳಿದಿದ್ದು, ಯಾರು ತೆರಿಗೆ ಪಾವತಿ ಮಾಡುವದಿಲ್ಲ ಅಂತಹವರ ವಿರುದ್ಧ ಸೂಕ್ತ ಕ್ರಮವಹಿಸಬೇಕು ಹಾಗೂ ತಿಂಗಳ ಅಂತ್ಯದವರೆಗೆ ಶೇ 50 ರಷ್ಟು ತೆರಿಗೆ ಸಂಗ್ರಹಣೆ ಮಾಡಬೇಕು ಎಂದು ಸೂಚಿಸಿದರು. ಹಾಗೂ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಸೂಕ್ತ ಸ್ಥಳ ಒದಗಿಸಬೇಕು ಮತ್ತು ಅರ್ಹರಿಗೆ ಗುರುತಿನ ಚೀಟಿ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಗೋಪಾಲ ಕೃಷ್ಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್, ನಗರಸಭೆಯ ವ್ಯವಸ್ಥಾಪಕಿ ಸುಜಾತ, ರಮೇಶ್, ಪ.ಪಂ. ಮುಖ್ಯಾಧಿಕಾರಿಗಳಾದ ಶ್ರೀಧರ್, ನಾಚಪ್ಪ, ಕೃಷ್ಣ ಪ್ರಸಾದ್, ವನಿತಾ ಇತರರು ಹಲವು ಮಾಹಿತಿ ನೀಡಿದರು.