ಗೋಣಿಕೊಪ್ಪಲು, ಅ. 15: ಕೊಡಗಿನ ಮೂಲಕ ಮಂಗಳೂರು, ಕೇರಳಕ್ಕೆ ತಲುಪಲು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಲ್ಲಿನ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಬಿಜೆಪಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನೋಟು ಕೊಟ್ಟು ಖರೀದಿ ಮಾಡಿ ಬಳಿಕ 5 ವರ್ಷ ರಾಜ್ಯವನ್ನು ಲೂಟಿ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮತ ನೀಡಬಾರದು. ಜಿಲ್ಲೆಯಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ವರೆಗೂ ಬಿಜೆಪಿ ಪ್ರತಿನಿಧಿಗಳೇ ಇದ್ದಾರೆ. ಜನತೆ ಕಾಗೆ ಓಡಿಸುವಂತೆ ಕೊಡಗಿನಿಂದ ಕಾಂಗ್ರೆಸ್ ಪಕ್ಷವನ್ನು ಓಡಿಸಿದ್ದಾರೆ. ಮುಂದೆಯೂ ಇದೇ ಕೆಲಸವಾಗಬೇಕು. ಕೊಡವ ಹಾಕಿ ಕಪ್, ದಸರಾ ಉತ್ಸವಕ್ಕೆ ಅನುದಾನ, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ, ವಿಶ್ವ ವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರಗಳ ಸ್ಥಾಪನೆಗೆ ಶ್ರಮಿಸಿದ ಇಂದಿನ ಇಬ್ಬರು ಬಿಜೆಪಿ ಶಾಸಕರನ್ನು ಮರಳಿ ಆಯ್ಕೆಮಾಡಬೇಕು ಎಂದು ಕೋರಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕೆ.ಸಿ. ವೇಣುಗೋಪಾಲ್ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಮನೆಮನೆಗೆ ಬರುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಟೀಕಿಸಿದರು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರೂ. 2 ಲಕ್ಷದ 48 ಕೋಟಿ ಸಾಲ ಮಾಡುವ ಮೂಲಕ ರಾಜ್ಯವನ್ನು ಸಾಲದಲ್ಲಿ ಮುಳುಗಿಸಿದ್ದಾರೆ ಎಂದು ದೂರಿದರು.
ಸ್ಥಾನೀಯ ಸಮಿತಿ ಅಧ್ಯಕ್ಷ ದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ, ಮುಖಂಡರಾದ ಗಿರೀಶ್ ಗಣಪತಿ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ಮಾಜಿ ಸದಸ್ಯೆ ಕಾಂತಿ ಸತೀಶ್, ತಾಲೂಕು ಪಂಚಾಯಿತಿ ಸದಸ್ಯ ಜಯ ಪೂವಯ್ಯ ಹಾಜರಿದ್ದರು.