ಮಡಿಕೇರಿ, ಅ. 15: ಕೊಡವ ಸಮಾಜಗಳ ಒಕ್ಕೂಟದ 6ನೇ ವರ್ಷದ ಕೊಡವ ನಮ್ಮೆಯ ಕ್ರೀಡಾ ಸಮಿತಿಯ ಪೂರ್ವಭಾವಿ ಸಭೆ ಹಾಗೂ ಹಾಕಿ ಪಂದ್ಯಾವಳಿಯ ಟೈಸ್ ಬಿಡುಗಡೆ ಕಾರ್ಯಕ್ರಮ ಕ್ರೀಡಾ ಸಮಿತಿ ಅಧ್ಯಕ್ಷ ಹಾಗೂ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅಧ್ಯಕ್ಷತೆಯಲ್ಲಿ ತಾ. 14ರಂದು ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಸಭಾಂಗಣ ದಲ್ಲಿ ನಡೆಯಿತು.

ಸಭೆಯಲ್ಲಿ ವಿವಿಧ ಕ್ರೀಡೆಗಳನ್ನು ಶಿಸ್ತುಬದ್ಧವಾಗಿ ಹಾಗೂ ಅದ್ಧೂರಿ ಯಾಗಿ ನಡೆಸಲು ತೀರ್ಮಾನಿಸ ಲಾಯಿತು. ಹಾಕಿ ಪಂದ್ಯಾವಳಿಯು 26, 27, 28ರಂದು ನಡೆಯಲಿದ್ದು, ತಾ.26ರ ಬೆಳಿಗ್ಗೆ 8.30 ಗಂಟೆಗೆ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಪಂದ್ಯಾಟ ಉದ್ಘಾಟಿಸಲಿದ್ದಾರೆ. 9 ಗಂಟೆಗೆ ಪೊನ್ನಂಪೇಟೆ ಹಾಗೂ ಆರಾಯಿರ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. 27ರಂದು 2 ಸೆಮಿ ಫೈನಲ್ ಪಂದ್ಯ, 28 ರಂದು ಮಧ್ಯಾಹ್ನ 2 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ.

ಹಾಕಿ ಪಂದ್ಯಾವಳಿ ಎಲ್ಲಾ ಕೊಡವ ಸಮಾಜಗಳ ನಡುವೆ ನಡೆಯಲಿದೆ. ಪಂದ್ಯಾಟದಲ್ಲಿ ಗೆಲುವು ಸಾಧಿಸುವ ತಂಡಕ್ಕೆ 30,000 ಹಾಗೂ ಆಕರ್ಷಕ ರೋಲಿಂಗ್ ಮತ್ತು ವೈಯಕ್ತಿಕ ಟ್ರೋಫಿಗಳನ್ನು ನೀಡಲಾಗುತ್ತದೆ. ದ್ವಿತೀಯ 20 ಸಾವಿರ ಮತ್ತು ಟ್ರೋಫಿ, 3 ಮತ್ತು 4ನೇ ಸ್ಥಾನ ಪಡೆÀಯುವ ತಂಡಗಳಿಗೆ ತಲಾ 5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ತಿಳಿಸಿದರು. ಪಾಲ್ಗೊಂಡ ಎಲ್ಲಾ ತಂಡಗಳಿಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಸಭೆಯಲ್ಲಿ ಹಾಕಿ ಪಂದ್ಯಾವಳಿಯ ಟೈಸ್‍ಅನ್ನು ಬಿಡುಗಡೆಗೊಳಿಸಲಾಯಿತು.

ತಾ.27ರಂದು ಎಲ್ಲಾ ಕೊಡವ ಸಮಾಜಗಳ ನಡುವೆ ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಅದೇ ದಿನ .22ವಿನಿಂದ 50 ಮೀ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದ್ದು ಮೊದಲನೇ ಬಹುಮಾನವಾಗಿ 5000 ನಗದು ಮತ್ತು ಟ್ರೋಫಿ, 2ನೇ ಬಹುಮಾನವಾಗಿ 3000 ಹಾಗೂ ಆಕರ್ಷಕ ಟ್ರೋಫಿ, 3ನೇ ಬಹುಮಾನ 2 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ನಿರ್ವಹಣೆಯನ್ನು ಪಾಡೆಯಂಡ ಕಾರ್ಯಪ್ಪ (9886399751), ಕಬ್ಬಚ್ಚಿರ ಶರತ್ (9880472728), ಮಂಡುಡ ಅಜಿತ್ (9448976428), ಮಣವಟ್ಟೀರ ಪೊನ್ನಣ್ಣ (9980398067) ಇವರು ನಿರ್ವಹಿಸಲಿದ್ದಾರೆ.

ತಾ.28ರಂದು ಹಗ್ಗಜಗ್ಗಾಟದ ಮಹಿಳೆಯರ ಮತ್ತು ಪುರುಷರ ಫೈನಲ್ ನೆರವೇರಲಿದ್ದು, ತಾ.27ರಂದು ಭಾರದಕಲ್ಲು ಎಸೆಯುವ ಸ್ಪರ್ಧೆ ಎರಡೂ ವಿಭಾಗಗಳಿಗೂ ನಡೆಯಲಿದೆ. ಒಂದು ಕೊಡವ ಸಮಾಜದಿಂದ ಇಬ್ಬರ ಹೆಸರನ್ನು ಸ್ಪರ್ಧೆಗೆ ನೊಂದಾಯಿಸಿಕೊಳ್ಳಬಹುದಾಗಿದೆ.

ವೇದಿಕೆಯಲ್ಲಿ ಪ್ರಧಾನ ಸಂಚಾಲಕ ಕಂಬೀರಂಡ ಕಿಟ್ಟು ಕಾಳಪ್ಪ, ಸಂಚಾಲಕ ಬೊಳಿಯಂಗಡ ದಾದು ಪೂವಯ್ಯ, ಗೌ.ಕಾರ್ಯದರ್ಶಿ ಕೋಟೆರ ರಘು ಕಾರ್ಯಪ್ಪ ಮತ್ತು ಕ್ರೀಡಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.