ಸೋಮವಾರಪೇಟೆ, ಅ. 15: ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದ ವತಿಯಿಂದ ತಾ. 22 ರಂದು ಪೂರ್ವಾಹ್ನ 10 ಗಂಟೆಗೆ ಇಲ್ಲಿನ ಮಹಿಳಾ ಸಮಾಜದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನೆ, ಶಿಕ್ಷಕರು ಮತ್ತು ಸಾಹಿತ್ಯ-ಸಾಂಸ್ಕøತಿಕ ಕ್ಷೇತ್ರದಲ್ಲಿನ ಸಾಧಕರಿಗೆ ಸನ್ಮಾನ, ಜಿಲ್ಲಾಮಟ್ಟದ ಕವಿಗೋಷ್ಠಿ ಹಾಗೂ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಶಿಕ್ಷಣ ಕ್ಷೇತ್ರ, ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಸಾಧನೆ ತೋರಿರುವ 7 ಮಂದಿಯನ್ನು ಸನ್ಮಾನಿಸಲಾಗುವದು. ಜತೆಗೆ ಜಿಲ್ಲಾಮಟ್ಟದ ಕವಿಗೋಷ್ಠಿ, ತಾಲೂಕು ಮಟ್ಟದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕದ ಇತಿಹಾಸ, ನಾಡು ನುಡಿ, ಸಂಸ್ಕøತಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ರಸಪ್ರಶ್ನೆ ಪ್ರಶ್ನೆಗೆ ಪ್ರತಿ ಶಾಲೆಯಿಂದ ಈರ್ವರು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದಂತೆ (ಪ್ರೇಮ ಕಾವ್ಯ ಹೊರತುಪಡಿಸಿ) 20 ಸಾಲುಗಳಿಗೆ ಮೀರದಂತೆ, ಬೇರೆಲ್ಲೂ ವಾಚಿಸಲ್ಪಟ್ಟಿರದ, ಸ್ವರಚಿತ ಕವನಗಳನ್ನು ತಾ. 20 ರೊಳಗೆ ಕರವೇ ಕಚೇರಿ ವಿಳಾಸಕ್ಕೆ ಕಳುಹಿಸಿಕೊಡಬೇಕು ಎಂದು ಸುದರ್ಶನ್ ತಿಳಿಸಿದರು.

ಕವಿಗೋಷ್ಠಿ, ರಸಪ್ರಶ್ನೆ ಸ್ಪರ್ಧೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಮೊ; 9900595761, 8970075594 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕರವೇ ಸಾಹಿತ್ಯ ಘಟಕದ ಉಪಾಧ್ಯಕ್ಷೆ ಅನಿತಾ ಶುಭಾಕರ್, ಸಂಚಾಲಕಿ ಎಂ.ಎ. ರುಬೀನಾ, ಗೌರವ ಕಾರ್ಯದರ್ಶಿ ನ.ಲ. ವಿಜಯ, ಉಪ ಕಾರ್ಯದರ್ಶಿ ಪುಟ್ಟಣ್ಣ ಆಚಾರ್ಯ ಅವರುಗಳು ಉಪಸ್ಥಿತರಿದ್ದರು.