ಮಡಿಕೇರಿ, ಅ. 15: ಪ್ರಸಕ್ತ ವರ್ಷದಲ್ಲಿ ಜರುಗಿದ ಶ್ರೀ ಕಾವೇರಿ ಪುಷ್ಕರ ಸ್ನಾನದ ಹಿನ್ನೆಲೆಯಿಂದಾಗಿ, ಕಳೆದ ಸೆಪ್ಟಂಬರ್ 12 ರಿಂದ ಇದುವರೆಗಿನ 1 ತಿಂಗಳ ಅವಧಿಯಲ್ಲಿ ಕೊಡಗಿನ ಕುಲಮಾತೆ ಹಾಗೂ ದಕ್ಷಿಣ ಗಂಗೆಯೆಂಬ ಪ್ರಖ್ಯಾತಿಯುಳ್ಳ ತಲಕಾವೇರಿ ಕ್ಷೇತ್ರಕ್ಕೆ 10 ಸಾವಿರಕ್ಕೂ ಅಧಿಕ ವಾಹನಗಳೊಂದಿಗೆ ಲಕ್ಷಾಂತರ ಯಾತ್ರಾರ್ಥಿಗಳು ಆಗಮಿಸಿದ್ದಾರೆ.ಪವಿತ್ರ ಪುಷ್ಕರ ಸ್ನಾನಕ್ಕೆಂದೇ ಆಂಧ್ರಮೂಲದ ಯತ್ರಾರ್ಥಿಗಳು 300ಕ್ಕೂ ಅಧಿಕ ಬಸ್‍ಗಳಲ್ಲಿ ಆಗಮಿಸಿರುವ ಮಾಹಿತಿ ‘ಶಕ್ತಿ’ಗೆ ಲಭಿಸಿದೆ. ಇದರೊಂದಿಗೆ ಇತರ ಮಿನಿ ಬಸ್‍ಗಳು, ಕಾರು, ದ್ವಿಚಕ್ರ ವಾಹನಗಳು ಸೇರಿದಂತೆ ಕೇವಲ ಒಂದು ತಿಂಗಳ ನಡುವೆ ಹತ್ತು ಸಾವಿರದ ಇನ್ನೂರ ಐವತ್ತು ವಾಹನಗಳಲ್ಲಿ ಇದುವರೆಗೆ ಲಕ್ಷಾಂತರ ಯಾತ್ರಾರ್ಥಿಗಳು ಕ್ಷೇತ್ರ ದರ್ಶನ ಕೈಗೊಂಡಿದ್ದಾರೆ.

ಈ ನಡುವೆ ನಿತ್ಯ ಬರುವ ಯಾತ್ರಾರ್ಥಿಗಳ ಸಂಖ್ಯೆ ಶ್ರೀ ಕಾವೇರಿ ಕ್ಷೇತ್ರಕ್ಕೆ ಅಧಿಕಗೊಳ್ಳುತ್ತಿದ್ದು, ತಾ. 17 ರಂದು ಜರುಗಲಿರುವ ತುಲಾ ಸಂಕ್ರಮಣ ಜಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಆಗಮಿಸಬಹುದು ಎಂದು ನಿರೀಕ್ಷಿಸಲಾಗಿದೆ. ನಿನ್ನೆ ಕೂಡ ಭಾಗಮಂಡಲ - ತಲಕಾವೇರಿಯಲ್ಲಿ ಭಕ್ತರ ಸಂಖ್ಯೆ ಅಧಿಕ ಗೋಚರಿಸಿತು. ನಿನ್ನೆ ಮಧ್ಯಾಹ್ನದ ಸುಮಾರಿಗೆ 70 ಬಸ್ಸುಗಳು, 80ಕ್ಕೂ ಅಧಿಕ ಮಿನಿ ವಾಹನಗಳು, ಇಪ್ಪತ್ತಕ್ಕೂ ಅಧಿಕ ದ್ವಿಚಕ್ರ ವಾಹನಗಳು ಕಂಡು ಬಂದರೆ, ಇಂದು ಮುಂಜಾನೆಯಿಂದ ಮಧ್ಯಾಹ್ನ ವೇಳೆಗೆ 50ಕ್ಕೂ ಅಧಿಕ ಬಸ್ಸುಗಳು, 200ಕ್ಕೂ ಹೆಚ್ಚಿನ ಕಾರುಗಳೊಂದಿಗೆ ಸಾಕಷ್ಟು ದ್ವಿಚಕ್ರ ವಾಹನಗಳಲ್ಲಿ ಕ್ಷೇತ್ರ ದರ್ಶನಕ್ಕೆ ಆಗಮಿಸಿದ್ದು, ಎದುರಾಯಿತು.

ಹೀಗಾಗಿ ಮುಂದಿನ ದಿನಗಳಲ್ಲಿ ತುಲಾ ಸಂಕ್ರಮಣ ಪರ್ವ ಕಾಲದೊಂದಿಗೆ

(ಮೊದಲ ಪುಟದಿಂದ) ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರ ದರ್ಶನಕ್ಕೆ ಹೊರರಾಜ್ಯ ಗಳೊಂದಿಗೆ ವಿಶೇಷವಾಗಿ ಕೊಡಗು ಜಿಲ್ಲೆಯ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿರುವದು ಪ್ರತಿವರ್ಷದ ಲೆಕ್ಕಾಚಾರವಾಗಿದೆ. ಆ ದಿಸೆಯಲ್ಲಿ ತಾ. 16 ರಂದು (ಇಂದು) ರಾತ್ರಿಯಿಂದಲೇ ಕ್ಷೇತ್ರ ದರ್ಶನಕ್ಕೆ ಬರುವವರಿಗೆ ವಿಶೇಷ ಪೂಜಾ ವ್ಯವಸ್ಥೆ ಹಾಗೂ ಕೊಡಗು ಏಕೀಕರಣ ರಂಗದಿಂದ ಉಪಾಹಾರ, ಅನ್ನದಾನದ ತಯಾರಿ ನಡೆದಿದೆ.

ಈ ಹಿಂದಿನ ವರ್ಷಗಳಿಗಿಂತಲೂ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡಿರುವದು ಕಂಡು ಬಂತು. ಇಂದು ಕೂಡ ತಲಕಾವೇರಿ, ಭಾಗಮಂಡಲ ಸುತ್ತಮುತ್ತ ಮೋಡ ಕವಿದ ವಾತಾವರಣದೊಂದಿಗೆ ಮಳೆ ಹನಿಯುತ್ತಿದ್ದ ದೃಶ್ಯ ಎದುರಾಯಿತು.