ಮೂರ್ನಾಡು, ಅ. 15: ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕನ್ನಡ ಬರೆಯುವ ಪ್ರಬಂಧ ಸ್ಪರ್ಧೆ ನಡೆಯಿತು.

ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಮೂರ್ನಾಡು ಹೋಬಳಿಯಿಂದ ಮಡಿಕೇರಿ ತಾಲೂಕು ಮಟ್ಟದ ಸ್ಪರ್ಧೆಗೆ ಮೂರ್ನಾಡು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿ ವೈ.ಎ. ಅಶ್ವಿನಿ ಹಾಗೂ ಮರಗೋಡು ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಸಿ. ಅಂಜಲಿ ಆಯ್ಕೆಗೊಂಡರು. ಸ್ಪರ್ಧೆಯಲ್ಲಿ ಮೂರ್ನಾಡು ಹೋಬಳಿಗೆ ಒಳಪಟ್ಟ ಹಾಕತ್ತೂರು ಪ್ರೌಢಶಾಲೆ, ಮರಗೋಡು ಭಾರತಿ ಪ್ರೌಢಶಾಲೆ, ಮೂರ್ನಾಡು ವಿದ್ಯಾಸಂಸ್ಥೆ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಕೋಡಂಬೂರು ಜ್ಞಾನಜ್ಯೋತಿ ಪ್ರೌಢಶಾಲೆ, ಮಾರುತಿ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಪಿ.ಪಿ. ಸುಕುಮಾರ್ ಮಾತನಾಡಿ ಹೋಬಳಿ ಮಟ್ಟದಲ್ಲಿ ಸ್ಪರ್ಧೆ ನಡೆಸಿ ವಿಜೇತರಾದ ವಿದ್ಯಾರ್ಥಿಗಳನ್ನು ತಾಲೂಕು ಮಟ್ಟಕ್ಕೆ, ತಾಲೂಕು ಮಟ್ಟದಲ್ಲಿ ವಿಜೇತ ವಿದ್ರ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಸದಸ್ಯ ವೆಂಕಟರಮಣ ಭಟ್ ಹಾಗೂ ಕಿಗ್ಗಾಲು ಗಿರೀಶ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಪರಿಷತ್ತು ಕಾರ್ಯದರ್ಶಿ ರಾಜೇಶ್ವರಿ ಶಿವಾನಂದ್, ಕೂಡಂಡ ಸಾಬ ಸುಬ್ರಮಣಿ, ಜಾನಕಿ ಹಾಗೂ ಸದಸ್ಯರು ಹಾಜರಿದ್ದರು.