ಸಿದ್ದಾಪುರ, ಅ. 15: ಕೇಂದ್ರ ಸರ್ಕಾರವು ಜಿ.ಎಸ್.ಟಿ. ಜಾರಿಗೊಳಿಸಿದ ನಂತರ ರೈತರು ಸೇರಿದಂತೆ ಬಡವರ್ಗದವರಿಗೆ ಹೆಚ್ಚಿನ ತೆರಿಗೆಯ ಹೊರೆಯಾಗಿದೆಂದು ಜೆ.ಡಿ.ಎಸ್. ಮುಖಂಡ ಹಾಗೂ ಮಾಜಿ ಸಚಿವ ಬಿ.ಎ. ಜೀವಿಜಯನವರು ಆರೋಪಿಸಿದರು. ವಾಲ್ನೂರು ಗ್ರಾಮದ ಬಸವೇಶ್ವರ ದೇವಾಲಯದ ಮೈದಾನದಲ್ಲಿ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಯುವ ಜನತಾದಳದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ ಕುಮಾರಸ್ವಾಮಿರವರ 20 ತಿಂಗಳ ಅವಧಿಯ ಆಡಳಿತದಲ್ಲಿ ಉಚಿತ ಸೈಕಲ್ ಸೇರಿದಂತೆ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಬಾರಿಯ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವದು ಖಚಿತ ಎಂದರು. ಜೆ.ಡಿ.ಎಸ್. ಮುಖಂಡ ಎ.ವಿ. ಶಾಂತಕುಮಾರ್ ಮಾತನಾಡಿ ರಾಜ್ಯದಲ್ಲಿ ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ಕಾಲಹರಣ ಮಾಡುತ್ತಿದೆ ಎಂದು ಲೇವಡಿ ಮಾಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್, ಗ್ರಾ.ಪಂ. ಅಧ್ಯಕ್ಷೆ ನಾಗರತ್ನ, ಜೆ.ಡಿ.ಎಸ್. ಪಕ್ಷದ ಪದಾಧಿಕಾರಿಗಳಾದ ಸುರೇಶ್, ಚಂಗಪ್ಪ, ಲಿಂಗುರಮೇಶ್ ಕೊಳಂಬೆ ವಿನು, ಮುಂಡ್ರುಮನೆ ಸುದೀಶ್, ಜಯಕುಮಾರ್, ಇನ್ನಿತರರು ಹಾಜರಿದ್ದರು.