ಕೂಡಿಗೆ, ಅ. 16 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟೀಷರ ಕಾಲದಲ್ಲಿ ಗೋ ಸಂರಕ್ಷಣೆಗಾಗಿ ನಿರ್ಮಿಸಲಾಗಿದ್ದ ಗೋ ಸದನವನ್ನು (ಕೊಟ್ಟಿಗೆ) ಸಾಮಾಜಿಕ ಅರಣ್ಯ ಇಲಾಖೆ ಜಾಗ ಸಮತಟ್ಟು ಮಾಡುವ ನೆಪದಲ್ಲಿ ಹಾನಿ ಮಾಡಿದೆ ಎಂದು ಹುದುಗೂರು ಗ್ರಾಮಸ್ಥರು ಆರೋಪಿಸಿದ್ದಾರೆ.

ಬ್ರಿಟೀಷರ ಕಾಲದಲ್ಲಿ ನಿರ್ಮಿಸ ಲಾಗಿದ್ದ ಈ ಗೋ ಸಾಕಾಣಿಕ ಕೇಂದ್ರವನ್ನು ಕಳೆದ 75 ವರ್ಷಗಳಿಂದ ಹುದುಗೂರು ಗ್ರಾಮಸ್ಥರುಗಳಿಗೆ ಅನುಕೂಲವಾಗು ವಂತೆ ಅಲ್ಲಿನ ಹಿರಿಯ ತಲೆಮಾರಿ ನವರು ತಮ್ಮ ತಮ್ಮ ಹಸುಗಳನ್ನು ಆ ಸ್ಥಳದಲ್ಲಿ ಕಟ್ಟಿ ಸಂರಕ್ಷಣೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಪಕ್ಕದಲ್ಲಿದ್ದ ಸುಮಾರು ಎಕರೆ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಯವರು ರೈತರಿಗೆ ವಿತರಣೆ ಮಾಡಲು ಸಸಿಗಳನ್ನು ಬೆಳೆಸಲು ಉಪಯೋಗಿಸುತ್ತಿದ್ದರು. ಆದರೆ ಇದೀಗ ಜಾಗವನ್ನು ಸಮತಟ್ಟುವ ಯೋಜನೆಯಲ್ಲಿ ಗೋಸದನಕ್ಕೆ ಹಾನಿಯುಂಟು ಮಾಡಿ ಕಟ್ಟಡವನ್ನು ಬೀಳಿಸುವ ಹಂತಕ್ಕೆ ತಲುಪಿಸಿದ್ದಾರೆ.

ಸ್ಥಳಕ್ಕೆ ಕೂಡಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲ, ಸದಸ್ಯ ರವಿ ಭೇಟಿ ನೀಡಿ ಪರಿಶೀಲಿಸಿದರು. ಈ ಜಾಗ ಜಿಲ್ಲಾ ಪಂಚಾಯ್ತಿ ಅಧೀನದಲ್ಲಿರುವದರಿಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಸೇರಿದಂತೆ ನಾಲ್ಕು ಗ್ರಾಮಗಳ ದನ-ಕರುಗಳಿಗೆ ಅನುಕೂಲವಾಗಲು ಇರುವ ಕಟ್ಟಡವನ್ನು ದುರಸ್ಥಿಗೊಳಿಸಿಕೊಂಡು ಗೋ ಸಂರಕ್ಷಣೆ ಮಾಡಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಯವರಿಗೂ, ಪಶು ಸಂಗೋಪನ ಸಚಿವರಿಗೂ, ಜಿಲ್ಲೆಯ ಪಶುಪಾಲನ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಗ್ರಾಮ ಪಂಚಾಯ್ತಿಯ ಅಧ್ಯಕ್ಷೆ ಪ್ರೇಮಲೀಲ ಸುದ್ದಿಗಾರರಿಗೆ ತಿಳಿಸಿದ್ದಾರೆ.

- ಕೆ. ಕೆ. ನಾಗರಾಜಶೆಟ್ಟಿ.