ಮಡಿಕೇರಿ, ಅ. 16: ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಂದಾಜು ರೂ. 22 ಲಕ್ಷ ಮೌಲ್ಯದ ನಕಲಿ ಚಿನ್ನವನ್ನು ಗಿರವಿ ಇಟ್ಟು, ನೈಜ ಚಿನ್ನವೆಂದು ನಂಬಿಸಿ ಮೋಸವೆಸಗಿರುವ ಪ್ರಕರಣ ಸಂಬಂಧ ಇಂದು ಆಡಳಿತ ಮಂಡಳಿಯು ತುರ್ತು ಸಭೆ ನಡೆಸಿ ಕಾನೂನು ಕ್ರಮಕ್ಕೆ ಮುಂದಾಗಿರುವ ಕುರಿತು ಗೊತ್ತಾಗಿದೆ.

ಪಾಲಿಬೆಟ್ಟ ಕೃಷಿ ಪತ್ತಿನ ಸಂಘದಲ್ಲಿ ಪಿ.ಕೆ. ಲೈಲಾ ಉಸ್ಮಾನ್ ಎಂಬ ಮಹಿಳೆ ಮೂರು ವರ್ಷಗಳ ಹಿಂದೆ ಅಲ್ಲಿನ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಪಿ.ಸಿ. ಕೃಷ್ಣ ಎಂಬವರ ಮೂಲಕ ನಗ ಪರಿವೀಕ್ಷಕ ವೆಂಕಟೇಶ್ ಎಂಬವರ ತಪಾಸಣೆಯೊಂದಿಗೆ ಅಸಲಿ ಚಿನ್ನವೆಂದು ನಕಲಿ ಆಭರಣವಿಟ್ಟು ಸಂಘಕ್ಕೆ ವಂಚಿಸಿರುವದು ಖಾತರಿಯಾಗಿದೆ.

ಆ ಬೆನ್ನಲ್ಲೇ ಇಂದು ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ. ಸುಬ್ರಮಣಿ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಸದಾ ಅಪ್ಪಚ್ಚು ಸೇರಿದಂತೆ ಎಲ್ಲಾ ನಿರ್ದೇಶಕರು ತುರ್ತು ಸಭೆ ಸೇರಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಿರ್ಣಯ ಅಂಗೀಕರಿಸಿರುವದಾಗಿ ಗೊತ್ತಾಗಿದೆ. ವಿಶ್ವಾಸನೀಯ ಮೂಲಗಳ ಪ್ರಕಾರ ಓರ್ವ ಸಾಮಾನ್ಯ ಕಾರ್ಮಿಕ ಮಹಿಳೆ ಬಳಿ ಅಂದಾಜು ಕೆ.ಜಿ. ಯಷ್ಟು ಚಿನ್ನ ಗಳಿಸಲು ಹೇಗೆ ಸಾಧ್ಯ ಎಂಬ ವಿಷಯವಾಗಿ ಇಂದಿನ ಸಭೆಯಲ್ಲಿ ಗಂಭೀರ ಚರ್ಚೆಯೊಂದಿಗೆ, ನಕಲಿ ಚಿನ್ನಾಭರಣವನ್ನು ಸಹಕಾರ ಸಂಸ್ಥೆ ಹಾಗೂ ಬ್ಯಾಂಕ್‍ಗಳಲ್ಲಿ ಅಡವಿಟ್ಟು ವಂಚಿಸುತ್ತಿರುವ ವ್ಯವಸ್ಥಿತ ಜಾಲದ ಶಂಕೆ ವ್ಯಕ್ತಗೊಂಡಿದೆ.

ಹೀಗಾಗಿ ಜವಾಬ್ದಾರಿಯುತ ಅಧಿಕಾರಿ ಹಾಗೂ ನಗ ಪರಿವೀಕ್ಷಕ ಇಲ್ಲಿ ಆಮಿಷಕ್ಕೆ ಒಳಗಾಗಿರುವ ಗುಮಾನಿಯೊಂದಿಗೆ, ವಿಎಸ್ ಎಸ್‍ಎನ್ ಆಡಳಿತ ಮಂಡಳಿಯು ಇಂದು ತುರ್ತು ಸಭೆಯ ಬೆನ್ನಲ್ಲೇ, ಸಂಬಂಧಪಟ್ಟವರ ವಿರುದ್ಧ ಜಿಲ್ಲಾ ಸಹಕಾರ ಇಲಾಖೆ ಉಪನಿಬಂಧಕರಿಗೆ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಕೋರಲು ನಿರ್ಣಯಿಸಿರುವದಾಗಿ ಸುಳಿವು ಲಭಿಸಿದೆ.

ಅಲ್ಲದೆ, ಆಡಳಿತ ಮಂಡಳಿಗೆ ಸಹಕಾರ ಇಲಾಖೆಯ ನಿಬಂಧಕರಿಂದ ಲಭಿಸಬಹುದಾಗಿರುವ ನಿರ್ದೇಶನ ವನ್ನು ಕಾದು ನೋಡಿ. ಮುಂದಿನ ತೀರ್ಮಾನ ಕೈಗೊಳ್ಳಲು ಇಂದಿನ ಸಭೆ ನಿರ್ಧರಿಸಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ಪ್ರಸಕ್ತ ಪಾಲಿಬೆಟ್ಟ ವಿಎಸ್‍ಎಸ್‍ಎನ್‍ನಲ್ಲಿ ನಡೆದಿರುವ ನಕಲಿ ಚಿನ್ನ ವಂಚನೆ ಪ್ರಕರಣದಿಂದ ಇತರೆಡೆಗಳಲ್ಲಿಯೂ ಇಂತಹ ಜಾಲ ಕಾರ್ಯಾಚರಿಸು ತ್ತಿರುವ ಸಂಶಯ ವ್ಯಕ್ತಗೊಂಡಿದ್ದು, ಕೊಡಗಿನ ಸಹಕಾರಿ ಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕಿದೆ.

ಪಾಲಿಬೆಟ್ಟ ಹಗರಣದಲ್ಲಿ ಸಿಲುಕಿರುವ ಕೇರಳ ಮೂಲದ ಮಹಿಳೆ ಇತರೆಡೆಗಳಲ್ಲಿಯೂ ಈ ರೀತಿ ವಂಚಿಸಿರುವ ಆರೋಪಗಳು ಕೇಳಿ ಬಂದಿದ್ದು, ವ್ಯವಸ್ಥಿತ ಜಾಲ ಇದರ ಹಿಂದಿರುವ ಸಾಧ್ಯತೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಸಹಕಾರ ಇಲಾಖೆಯ ತನಿಖೆಯಿಂದ ನೈಜಾಂಶ ಹೊರಬೀಳಬೇಕಿದೆ.