ಮಡಿಕೇರಿ, ಅ. 16: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು 2017-18ನೇ ಸಾಲಿಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಲಘುವಾಹನ ಚಾಲನ ಪರವಾನಿಗೆ ಹೊಂದಿದ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ 12 ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ರೂ.3 ಲಕ್ಷಗಳ ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರವಾಸಿ ಟ್ಯಾಕ್ಸಿಗೆ ತಗಲುವ ಒಟ್ಟು ವೆಚ್ಚದಲ್ಲಿ ರೂ.3 ಲಕ್ಷಗಳನ್ನು ಸಹಾಯಧನದ ರೂಪದಲ್ಲಿ, ಶೇ.5ರಷ್ಟು ಫಲಾನುಭವಿ ಭರಿಸುವದು ಮತ್ತು ಒಟ್ಟು ಕಾರಿನ ಬೆಲೆಯ ಉಳಿಕೆ ಮೊತ್ತವನ್ನು ಫಲಾನುಭವಿಯು ಬ್ಯಾಂಕ್ ಸಾಲದ ಮುಖಾಂತರ ಭರಿಸಿ ಪ್ರವಾಸಿ ಟ್ಯಾಕ್ಸಿ ವಿತರಿಸಲು ಯೋಜನೆ ರೂಪಿಸಲಾಗಿದೆ.

ಅರ್ಜಿದಾರರು ಹೊಂದಿರಬೇಕಾದ ಅರ್ಹತೆಗಳು:- ಅರ್ಜಿದಾರ ಫಲಾನುಭವಿಗಳು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು. 20 ರಿಂದ 40 ವರ್ಷದೊಳಗಿರಬೇಕು. ಈ ಯೋಜನೆಗೆ ಮಹಿಳಾ ಅಭ್ಯರ್ಥಿಗಳು ಅರ್ಹರು. ಕನಿಷ್ಟ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಲಘು ವಾಹನ ಚಾಲನಾ ಪರವಾನಿಗೆಯನ್ನು ಪಡೆದು ಕನಿಷ್ಟ ಒಂದು ವರ್ಷ ಪೂರ್ಣಗೊಂಡಿರಬೇಕು ಹಾಗೂ ಬ್ಯಾಡ್ಜನ್ನು ಹೊಂದಿರಬೇಕು.

ಕೊಡಗು ಜಿಲ್ಲೆಯ ನಿವಾಸಿಯಾಗಿರಬೇಕು. ವಾರ್ಷಿಕ ಆದಾಯದ ಮಿತಿ ನಗರ ಪ್ರದೇಶದ ಅಭ್ಯರ್ಥಿಗಳಿಗೆ ರೂ.55 ಸಾವಿರ ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ರೂ.40 ಸಾವಿರಗಳು. ಯಾವದೇ ಸರ್ಕಾರಿ ಇಲಾಖೆಯಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರಬಾರದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸದರಿ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿರುತ್ತದೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:- ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ಅಂಕಪಟ್ಟಿ. ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಬಗ್ಗೆ ತಹಶೀಲ್ದಾರರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ ಹಾಗೂ ಪ್ರಸಕ್ತ ಸಾಲಿನ ಆದಾಯ ಪ್ರಮಾಣಪತ್ರ. ತಹಶೀಲ್ದಾರ್, ನಗರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ-ಇವುಗಳಲ್ಲಿ ಅರ್ಜಿದಾರರಿಗೆ ಅನ್ವಯಿಸುವವರಿಂದ ಪಡೆದಿರುವ ವಾಸಸ್ಥಳ ದೃಢೀಕರಣ ಪತ್ರ. ನಗರ ಸಭೆ/ಪಟ್ಟಣ ಪಂಚಾಯಿತಿ/ಗ್ರಾಮ ಪಂಚಾಯಿತಿ-ಇವುಗಳಿಂದ ಸ್ವ- ಉದ್ಯೋಗ ಕಲ್ಪಿಸಿಕೊಳ್ಳಲು ಯಾವದೇ ರೀತಿಯಾದ ಸೌಲಭ್ಯ ಪಡೆಯದೇ ಇರುವ ಬಗ್ಗೆ ಅವರಿಂದ ಪಡೆದಿರುವ ಪ್ರಸಕ್ತ ಸಾಲಿನ ದೃಢೀಕರಣ ಪತ್ರ. ದೇವರಾಜ ಅರಸು ಅಭಿವೃದ್ಧಿ ನಿಗಮ ಅಥವಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ಸ್ವ-ಉದ್ಯೋಗ ಕಲ್ಪಿಸಿಕೊಳ್ಳಲು ಯಾವದೇ ರೀತಿಯಾದ ಸೌಲಭ್ಯ ಪಡೆಯದೇ ಇರುವ ಬಗ್ಗೆ ದೃಡೀಕರಣ ಪತ್ರ.

ಬ್ಯಾಡ್ಜ್ ಹೊಂದಿರುವ ಲಘು ವಾಹನ ಚಾಲನಾ ಪರವಾನಿಗೆ ಹಾಗೂ ಆರ್.ಟಿ.ಓ ರವರಿಂದ ಡಿ.ಎಲ್ ಎಕ್ಷ್‍ಟ್ರಾಕ್ಟ್‍ನ ಪ್ರತಿ. ಅರ್ಜಿದಾರರು ಕೇಂದ್ರ /ರಾಜ್ಯ ಸರ್ಕಾರಗಳ ಇಲಾಖೆಗಳಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ಉದ್ಯೋಗ ಹೊಂದಿರದ ಬಗ್ಗೆ ತಹಶೀಲ್ದಾರರಿಂದ ಪಡೆದಿರುವ ಪ್ರಸಕ್ತ ಸಾಲಿನ ದೃಢೀಕರಣ ಪತ್ರ. ರೂ.50 ಬೆಲೆಯ ಛಾಪಾ ಕಾಗದದಲ್ಲಿ ಸ್ವಯಂ ದೃಢೀಕರಿಸಿದ ಅಫಿಡೆವಿಟ್ ಸಲ್ಲಿಸಬೇಕು. ಅಭ್ಯರ್ಥಿಗಳು ಮೇಲಿನ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ದ್ವಿಪ್ರತಿಗಳಲ್ಲಿ ಸಲ್ಲಿಸಬೇಕು.

ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟೀವರ್ಟ್ ಹಿಲ್ ರಸ್ತೆ, ಮಡಿಕೇರಿ, ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 4ರ ಸಂಜೆ 5 ಗಂಟೆಯೊಳಗೆ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.