ಶ್ರೀಮಂಗಲ, ಅ. 16: ಕೊಡಗು ಜಿಲ್ಲೆಯ ಮೂಲಕ ಕೇರಳಕ್ಕೆ ರೂಪಿಸಿದ ಹೈಟೆನ್ಷನ್ ವಿದ್ಯುತ್ ಮಾರ್ಗದ ವಿರುದ್ಧ ಚಳುವಳಿ ನಡೆಸಿದ ರೈತರ ಮೇಲೆ ಹಾಕಿರುವ ಪೊಲೀಸ್ ಮೊಕದ್ದಮೆ ಯನ್ನು ಹಿಂಪಡೆಯಬೇಕೆಂದು ರಾಜ್ಯ ಸರ್ಕಾರವನ್ನು ಜಿಲ್ಲಾ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ. ಕಳೆದ ಎರಡು ವರ್ಷದ ಹಿಂದೆ ಹೈಟೆÉನ್ಷನ್ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರು ಹಾಗೂ ಈ ಯೋಜನೆಯಿಂದ ಲಕ್ಷಾಂತರ ಮರ ಹನನವಾಗಿ ಪರಿಸರ ನಾಶದಿಂದ ಮಳೆ ಕೊರತೆ ಅನುಭವಿಸುವ ಆತಂಕದಿಂದ ರೈತರು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಈ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಯಾವದೇ ಅಹಿತಕರ ಘಟನೆಯಾಗಲಿ, ಸರ್ಕಾರಿ ಆಸ್ತಿ ಪಾಸ್ತಿಗೆ ನಷ್ಟ ಉಂಟುಮಾಡುವದಾಗಲಿ ಮಾಡದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು. ಆದರೆ, ಪ್ರತಿಭಟನೆ ನಡೆಸಿದ ರೈತರ ಮೇಲೆ ಈ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ 60ಕ್ಕೂ ಅಧಿಕ ರೈತರ ಮೇಲೆ ಕೇಸು ಹಾಕಲಾಗಿದೆ. ಹಲವು ರೈತರ ಮೇಲೆ 2 ರಿಂದ 5 ಸೆಕ್ಷನ್ ಹಾಕಲಾಗಿದೆ. ಅಲ್ಲದೆ, ಹಲವು ರೈತರ ಮೇಲೆ ಪ್ರತ್ಯೇಕವಾದ 2 ರಿಂದ 4 ಮೊಕದ್ದಮೆಗಳನ್ನು ಜಡಿಯಲಾಗಿದೆ. ಕೆಲವು ರೈತ ಹೋರಾಟಗಾರರ ಮೇಲೆ ಚುನಾವಣೆಯಲ್ಲಿ ಅಕ್ರಮ ಹಣ ಹಂಚಿಕೆಯ ಸೆಕ್ಷನ್‍ಗಳನ್ನು ಸಹ ಜಡಿಯುವ ಮೂಲಕ ರೈತ ಹೋರಾಟಗಾರರನ್ನು ದಮನ ಮಾಡುವ ದುರುದ್ದೇಶ ಇರುವದು ಸಹ ಮೇಲ್ನೊಟಕ್ಕೆ ಗೋಚರಿಸಿದೆ. ಇದರಿಂದ ಕಳೆದ 2 ವರ್ಷದಿಂದ ರೈತರು ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ ಎಂದು ಒಕ್ಕೂಟದ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು.

ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ರೈತರ ಮೇಲೆ ಹೂಡಿರುವ ಎಲ್ಲಾ ಪೊಲೀಸ್ ಮೊಕದ್ದಮೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಗೃಹ ಸಚಿವ ರಾಮಲಿಂಗರೆಡ್ಡಿ ಅವರನ್ನು ಸದÀ್ಯದಲ್ಲಿಯೇ ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸ ಲಾಯಿತು.

ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ ಹಾಜರಿದ್ದರು.