ಮಡಿಕೇರಿ ಅ. 16: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ದೀಪಾವಳಿ ಹಿನ್ನಲೆಯಲ್ಲಿ ಪಟಾಕಿ ಸಿಡಿಸುವಾಗಿನ ಮುನ್ನೆಚ್ಚರಿಕೆಯ ಜಾಗೃತಿ ಕರಪತ್ರವನ್ನು ನೇತ್ರತಜ್ಞೆ ಡಾ.ಬಿಂದು ಪೆÇನ್ನಪ್ಪ ಬಿಡುಗಡೆ ಗೊಳಿಸಿದರು.

ಮಡಿಕೇರಿ ರೋಟರಿ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ವತಿಯಿಂದ ರೂಪುಗೊಳಿಸಿದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಪಟಾಕಿ ಸಿಡಿಸುವಾಗ ಆಕಸ್ಮಿಕ ವಾಗಿ ಅಪಾಯ ಉಂಟಾದಲ್ಲಿ ಕಣ್ಣಿಗೆ ನೀರು ಸಿಂಪಡಿಸಬೇಡಿ, ಕಣ್ಣನ್ನು ಉಜ್ಜಬೇಡಿ, ತಿಳುವಳಿಕೆಯಿಲ್ಲದೆ ಔಷಧಿಯನ್ನು ಕಣ್ಣಿಗೆ ಹಚ್ಚದಿರಿ, ಇದರಿಂದಾಗಿ ನೇತ್ರಕ್ಕೆ ಮತ್ತಷ್ಟು ಹಾನಿ ಉಂಟಾಗುವ ಸಾಧ್ಯತೆಯೇ ಹೆಚ್ಚು ಎಂದು ಎಚ್ಚರಿಸಿದ ಡಾ.ಬಿಂದು ಪೆÇನ್ನಪ್ಪ, ಕಣ್ಣಿಗೆ ಪಟಾಕಿಗಳಿಂದ ಗಾಯ, ಸಮಸ್ಯೆ ಉಂಟಾದಲ್ಲಿ ಕೂಡಲೇ ಹತ್ತಿರದ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆಯುವದೇ ಸೂಕ್ತ ಎಂದು ಸಲಹೆ ನೀಡಿದರು.

ಪಟಾಕಿ ಸಿಡಿಸುವ ಸಂಬಂಧಿತ ಮುನ್ನಚ್ಚರಿಕೆಯ ಜಾಗೃತಿ ಕುರಿತಾಗಿ ರೋಟರಿ ಮಿಸ್ಟಿ ಹಿಲ್ಸ್ ರೂಪಿಸಿರುವ ವಿಡಿಯೋವನ್ನು ಅನಾವರಣ ಗೊಳಿಸಿದ ರೋಟರಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ಕೇವಲ ತೋರಿಕೆಗೆ, ವಿಜೃಂಭಣೆಗೆ ಸೀಮಿತವಾಗಿರುವ ಹಬ್ಬಗಳು ಮೂಲ ಆಶಯವನ್ನೇ ಜನರಲ್ಲಿ ಮರೆಸಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿಯಾಗಿ ದೀಪಾವಳಿ ಆಚರಿಸುವ ಸಂಬಂಧ ಪ್ರತಿಜ್ಞೆ ಕೈಗೊಳ್ಳಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್. ಟಿ. ಸ್ವಾಗತಿಸಿ, ಗೌರವ ಕಾರ್ಯದರ್ಶಿ ಪಿ. ಎಂ. ಸಂದೀಪ್ ವಂದಿಸಿದರು. ಕಾರ್ಯಕ್ರಮವನ್ನು ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ. ಜಿ. ಅನಂತಶಯನ, ಮುಂದಿನ ಸಾಲಿನ ಅಧ್ಯಕ್ಷ ಜಿ. ವಿ. ರವಿಶಂಕರ್, ಕ್ಲಬ್ ನಿರ್ದೇಶಕ ಕೆ. ಡಿ. ದಯಾನಂದ್, ಲೀನಾ ಪೂವಯ್ಯ ನಿರ್ವಹಿಸಿದರು.