ಕೂಡಿಗೆ, ಅ. 16: ಕವಿಗಳ ಪದಗಳು ಸಹೃದಯದವರನ್ನು ದಾಟಿ ಹೊರಗಿನ ಜನರನ್ನು ಮುಟ್ಟಬೇಕು ಹಾಗಾಗಬೇಕಾದರೆ, ಕವಿ ಪದಗಳನ್ನು ಮುರಿಯಬೇಕು ಮತ್ತು ಜೋಡಿಸುವ ದನ್ನು ಮೊದಲು ಕಲಿಯಬೇಕು. ಈ ಮುರಿಯುವ,ಜೋಡಿಸುವ ಕ್ರಿಯಾ ಕೌಶಲ್ಯ ಕಂಡುಕೊಂಡಲ್ಲಿ ಉತ್ತಮ ಕವಿಯಾಗಬಹುದು ಎಂದು ಹಿರಿಯ ಸಾಹಿತಿ ಕಣಿವೆಯ ಭಾರದ್ವಾಜ್ ಕೆ ಆನಂದತೀರ್ಥ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ಹೋಬಳಿ ಘಟಕದಿಂದ ಹಾರಂಗಿ ಜಲಾಶಯದ ನಿರೀಕ್ಷಣಾ ಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವನ ಸಿರಿ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಸಾಪ ಜಿಲ್ಲಾ ನಿರ್ದೇಶಕ ಫಿಲಿಪ್‍ವಾಸ್ ಮಾತನಾಡಿ ನಿಸರ್ಗದ ಮಡಿಲಲ್ಲಿ ಸ್ವರಚಿತ ಕವನ ರಚನೆಗೆ ಜಿಲ್ಲೆಯ ಕವಿಗಳಿಗೆ ಆಹ್ವಾನಿಸಿ ಸ್ಪರ್ಧೆ ನಡೆಸುವ ಮೂಲಕ ಕೊಡಗಿನಲ್ಲಿ ಉದಯೋನ್ಮುಖ ಕವಿಗಳಿಗೆ ವೇದಿಕೆಯನ್ನು ಹೋಬಳಿ ಘಟಕ ಕಲ್ಪಿಸಿದೆ, ಇತ್ತೀಚಿನ ದಿನಗಳಲ್ಲಿ ಕವನಗಳ ಮುದ್ರಣ ಪ್ರತಿಗಳನ್ನು ಓದುವದಕಿಂತ ಜಾಲತಾಣಗಳಲ್ಲಿ ಹಂಚಿಕೆಯಾದ ಕವನಗಳ ಓದುಗರೇ ಹೆಚ್ಚು ಎಂದರು.

ಕಸಾಪ ಕುಶಾಲನಗರ ಹೋಬಳಿ ಘಟಕದ ಅಧ್ಯಕ್ಷ ಎಂ.ಡಿ ರಂಗಸ್ವಾಮಿ ಮಾತನಾಡಿ ಒಬ್ಬ ಕವಿ ಸಮಾಜದ ಅಂಕುಡೊಂಕುಗಳನ್ನು, ಲೋಪದೋಷಗಳನ್ನು ಅರಿತು ಸ್ವಾಸ್ಥ್ಯ ಸುದಾರಣೆಗೆ ಕಾರಣಕರ್ತನಾಗ ಬಹುದು ಎಂದರು. ಕಳೆದೆರೆಡು ಸಾಲಿನಿಂದ ಸ್ಥಳದಲ್ಲೇ ಕವನ ರಚಿಸಿ ವಾಚಿಸುವ ಸ್ಪರ್ಧೆ ನಡೆಸಿಕೊಂಡು ಬರುತ್ತಿದ್ದೇವೆ, ಈ ಎಲ್ಲಾ ಕವನ ಸಂಕಲನಗಳನ್ನು ಒಗ್ಗೂಡಿಸಿ ಒಂದು ಹೊತ್ತಿಗೆಯ ರೂಪದಲ್ಲಿ ಕವನ ಸಂಕಲನಗಳನ್ನೊಳಗೊಂಡ ಪುಸ್ತಕವನ್ನು ಮುಂದಿನ ಸಾಲಿನಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದರು.

ಸ್ಪರ್ಧೆಯಲ್ಲಿ ಜಿಲ್ಲೆಯ 28 ಕವಿಗಳು ಭಾಗವಹಿಸಿದ್ದು, 5 ಕವನಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ 5 ಕವಿಗಳಿಗೆ ನಗದು ಬಹುಮಾನ, ಪ್ರಶಂಸನಾ ಪತ್ರ ಮತ್ತು ಭಾಗವಹಿಸಿದ್ದ ಎಲ್ಲಾ ಕವಿಗಳಿಗೂ ಪ್ರಶಂಸನಾ ಪತ್ರ ನೀಡಲಾಯಿತು. ಪ್ರಥಮ ಬಹುಮಾನ ತೇಜಸ್‍ಮೂರ್ತಿ ಪಡೆದುಕೊಂಡರು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ನಿರ್ದೇಶಕ ಗಿರೀಶ್ ಕಿಗ್ಗಾಲು, ಎನ್.ಎ. ಅಶ್ವತ್ ಕುಮಾರ್, ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ಹಂಡ್ರಂಗಿ ನಾಗರಾಜು, ಸಂಚಾಲಕ ಉ.ರಾ. ನಾಗೇಶ್, ಪದಾಧಿಕಾರಿಗಳಾದ ಭಾರತಿ, ಸೌಭಾಗ್ಯ, ಈಶ, ಜಂಶದ್ ಅಹಮದ್ ಖಾನ್ ಇದ್ದರು.