ಸೋಮವಾರಪೇಟೆ, ಅ.16: ಮೂವತ್ತಕ್ಕೂ ಅಧಿಕ ಬಾರಿ ದಂಡೆತ್ತಿ ಬಂದರೂ ಕೊಡಗಿನವರ ಎದುರು ಗೆಲ್ಲಲಾಗದ, ನಕಲಿ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್‍ನ ಜಯಂತಿಯನ್ನು ಕೊಡಗಿನಲ್ಲಿ ಆಚರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವದು ಖಂಡನೀಯ ವಾಗಿದ್ದು, ಟಿಪ್ಪು ಜಯಂತಿಯನ್ನು ವಿರೋಧಿಸದ ಕೊಡಗಿನ ಕಾಂಗ್ರೆಸ್ ನಾಯಕರೂ ಸಹ ಕೊಡಗಿನ ಬಗ್ಗೆ ಅಭಿಮಾನ ಶೂನ್ಯರಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಭಾರತೀಯ ಜತನಾ ಪಾರ್ಟಿಯ ವತಿಯಿಂದ ಸೋಮವಾರಪೇಟೆಯ ಜೆ.ಸಿ. ವೇದಿಕೆಯಲ್ಲಿ ಆಯೋಜಿಸ ಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಬಿಜೆಪಿ ಕಟುವಾಗಿ ವಿರೋಧಿಸುತ್ತಿದ್ದರೂ ಕೊಡಗಿನ ಅಭಿಮಾನ ಶೂನ್ಯರು ಈ ಬಗ್ಗೆ ವಿರೋಧಿಸುವ ಧೈರ್ಯ ತೋರುತ್ತಿಲ್ಲ ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೊಡಗಿಗೆ ಸಂಸದರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಸಂಸದರ ನಿಧಿಯಿಂದ ಅವರದೇ ಕುಟುಂಬ ಆತಿಥ್ಯ ವಹಿಸಿದ ಕೌಟುಂಬಿಕ ಹಾಕಿ ಉತ್ಸವಕ್ಕೆ 31 ಲಕ್ಷ, ಬಿದ್ದಾಟಂಡ ಕುಟುಂಬಕ್ಕೆ 20 ಲಕ್ಷ ನೀಡಿಲ್ಲವೇ? ವೀಣಾ ಅಚ್ಚಯ್ಯ ಅವರಿಗೆ ಕನಿಷ್ಟ ಕೃತಜ್ಞತಾಭಾವವೂ ಇಲ್ಲದಿರುವದು ಬೇಸರದ ಸಂಗತಿ ಎಂದು ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದರು.

54 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‍ನಿಂದ ಯಾವ ಅಭಿವೃದ್ಧಿಯಾಗಿದೆ. ಕೊಡಗಿನ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಲು ಮೋದಿ ಸರ್ಕಾರ ಬರಬೇಕಾಯಿತು. ಕುಶಾಲನಗರದ ವರೆಗೆ ರೈಲ್ವೇ ಸಂಪರ್ಕ ಕಲ್ಪಿಸಲು 667 ಕೋಟಿ ಅನುದಾನವನ್ನು ಕೇಂದ್ರ ನೀಡಿದ್ದರೂ ಸಹ ಕಾಂಗ್ರೆಸ್ ಸರ್ಕಾರ ಭೂಸ್ವಾಧೀನ ನಡೆಸುತ್ತಿಲ್ಲ ಎಂದು ದೂರಿದರು.

ತಾನು ಸಂಸದನಾಗಿ ಆಯ್ಕೆ ಯಾದ ಸಂದರ್ಭ ಕಸ್ತೂರಿ ರಂಗನ್ ವರದಿ ಗೊಂದಲವನ್ನು ನನ್ನ ಹೆಗಲಿಗೆ ಹಾಕಿ ಎಂದಿದ್ದೆ. ಈ ಮೂರೂವರೆ ವರ್ಷದಲ್ಲಿ ಕಸ್ತೂರಿರಂಗನ್ ವರದಿಯಿಂದ ಕೊಡಗಿಗೆ ಏನಾದರೂ ತೊಂದರೆಯಾಗಿದೆಯೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ನೀಡಿರುವ ವರದಿಯನ್ನು ಮುಂದಿನ 6 ತಿಂಗಳವರೆಗೆ ಪಕ್ಕಕ್ಕೆ ಇಡುವಂತೆ ಹೇಳಿದ್ದೇವೆ. ನಂತರ ನಮ್ಮದೇ ಸರ್ಕಾರ ಬರಲಿದ್ದು, ವರದಿಯಿಂದ ಕೊಡಗಿಗೆ ಯಾವದೇ ಅಪಾಯ ಸಂಭವಿಸದಂತೆ ನೋಡಿಕೊಳ್ಳುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿಯ ಮೂಲಕ ಕೊಡಗಿನ ಸಾಮರಸ್ಯ ಹಾಳು ಮಾಡಿದ್ದೇ ಅದರ ಸಾಧನೆಯಾಗಿದೆ. ಜಾತಿಗಳ ನಡುವೆ ಒಡಕು ಮೂಡಿಸುತ್ತಿದೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಬೇಡ ಎಂದು ಸರ್ಕಾರಕ್ಕೆ ಹೇಳುವ ‘ಧಮ್’ ಕಾಂಗ್ರೆಸ್ಸಿಗ ರಿಗಿದೆಯೇ? ಎಂದು ಪ್ರಶ್ನಿಸಿದರಲ್ಲದೇ, ಕಾಂಗ್ರೆಸ್‍ನ ಹಿರಿಯ ನಾಯಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಕೊಡಗಿಗೆ 1800 ಕೋಟಿ ಅನುದಾನ ನೀಡಿತ್ತು. ಕಾಂಗ್ರೆಸ್ ಸರ್ಕಾರದಿಂದ ಕೊಡಗಿಗೆ ನೀಡಿರುವ ಅನುದಾನ ಎಷ್ಟು ಎಂಬದರ ಬಗ್ಗೆ ತಕ್ಷಣ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು. ಸಾಲ ಮನ್ನಾ ಎಂಬದು ಚುನಾವಣಾ ಗಿಮಿಕ್ ಆಗಿದೆಯಷ್ಟೇ. ಇದುವರೆಗೂ ಸಹಕಾರ ಸಂಘಗಳಿಗೆ ಒಂದು ರೂಪಾಯಿಯೂ ಸಾಲ ಮನ್ನಾದ ಅನುದಾನ ಬಂದಿಲ್ಲ ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಬಜೆಟ್‍ನಲ್ಲಿ 200 ಕೋಟಿ ಘೋಷಿಸಿ ಕೇವಲ 41 ಕೋಟಿ ಮಾತ್ರ ನೀಡಿರುವ ಕಾಂಗ್ರೆಸ್ ಸರ್ಕಾರದಿಂದ ಕೊಡಗಿನ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು, 2.42ಲಕ್ಷ ಕೋಟಿ ಸಾಲದಲ್ಲಿ ಸರ್ಕಾರ ಮುಳುಗಿದೆ. ಸೋಮವಾರಪೇಟೆ ತಾಲೂಕಿನಲ್ಲೇ 800 ಮಂದಿ ವೃದ್ಧರಿಗೆ ವೃದ್ಧಾಪ್ಯ ವೇತನ ಸ್ಥಗಿತಗೊಳಿಸಲಾಗಿದೆ. ಸಿ ಮತ್ತು ಡಿ ಜಾಗ ಸಮಸ್ಯೆಯನ್ನು ಅರ್ಜಿ ಸಮಿತಿಯಲ್ಲಿ ಚರ್ಚಿಸಲಾಗಿದ್ದು, ತಕ್ಷಣ ಹಕ್ಕುಪತ್ರ ನೀಡಲು ಕ್ರಮವಹಿಸುತ್ತೇವೆ. 94 ಸಿ ಮತ್ತು 94ಸಿಸಿ ಅಡಿಯಲ್ಲಿ ಎಲ್ಲರೂ ಅರ್ಜಿ ಸಲ್ಲಿಸಬೇಕು ಎಂದು ರಂಜನ್ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಬಿ.ಜೆ. ದೀಪಕ್, ಮಂಜುಳಾ, ತಾ.ಪಂ. ಸದಸ್ಯರಾದ ತಂಗಮ್ಮ, ಧರ್ಮಪ್ಪ, ಕುಶಾಲಪ್ಪ, ಗಣೇಶ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಪಕ್ಷದ ಮುಖಂಡರಾದ ರಾಬಿನ್ ದೇವಯ್ಯ, ಮಹೇಶ್ ತಿಮ್ಮಯ್ಯ, ಜಪ್ಪು ಅಯ್ಯಪ್ಪ, ಜೆ.ಸಿ. ಶೇಖರ್, ನಳಿನಿ ಗಣೇಶ್, ಉಷಾ ತೇಜಸ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.