ಮಡಿಕೇರಿ, ಅ. 16: ಎಲ್ಲಿ ನೋಡಿದರಲ್ಲಿ ಮಕ್ಕಳು, ಪುಟಾಣಿಗಳಿಂದ ಹಿಡಿದು ಪ್ರೌಢರವರೆಗೆ ವಿವಿಧ ವೇಷ ಭೂಷಣಗಳೊಂದಿಗೆ ಕಂಗೊಳಿಸುತ್ತಿದ್ದರು.ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟವರು, ದೇವರ, ದಾರ್ಶನಿಕರ ವೇಷ ತೊಟ್ಟವರು, ಪ್ರಾಣಿ-ಪಕ್ಷಿಗಳಂತಾದವರು.., ಶಿಲಾ ಬಾಲಕಿಯತೆ ನಿಂತವರು, ಗೌತಮ ಬುದ್ಧನಾಗಿ ಧ್ಯಾನಕ್ಕೆ ಕುಳಿತವರು ನೆರೆದವರ ಕಣ್ಮನ ಸೆಳೆದರು., ಇದು ಕಂಡು ಬಂದಿದ್ದು, ಇಲ್ಲಿನ ಸಂತ ಮೈಕಲ್ಲರ ಪ್ರೌಢಶಾಲೆಯಲ್ಲಿ...ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಮತ್ತು ಮಾಧ್ಯಮಿಕ ಶಿಕ್ಷಣ ಅಭಿಯಾನ ಇವುಗಳ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧ ಕಾರ್ಯಕ್ರಮದಲ್ಲಿ ಗಮನ ಸೆಳೆದ ಮಕ್ಕಳು., ವಿಜೇತರಾದವರು ರಾಜ್ಯಮಟ್ಟಕ್ಕೆ ಅಡಿಯಿಟ್ಟರು.

ಕ್ರೀಯಾಶೀಲತೆಗೆ ಸಹಕಾರಿ

ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲತೆ ಬೆಳೆಸಿಕೊಳ್ಳುವಂತೆ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಅವರು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಂಗೀತ, ಸಾಹಿತ್ಯ, ಬರವಣಿಗೆ, ಕ್ರೀಡೆ ಹೀಗೆ ನಾನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವದು ಅಗತ್ಯ ಎಂದು ಅವರು ಹೇಳಿದರು.

ಕೊಡಗು ಜಿಲ್ಲೆ ಈ ಬಾರಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ 9ನೇ ಸ್ಥಾನ ಪಡೆದಿದ್ದು, 5 ನೇ ಸ್ಥಾನದೊಳಗೆ ಪಡೆಯಲು ಎಲ್ಲರೂ ಶ್ರಮಿಸಬೇಕಿದೆ ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಶಿಕ್ಷಕರು, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಶ್ರಮಿಸಬೇಕಿದೆ ಎಂದು ಶಶಿ ಸುಬ್ರಮಣಿ ಅವರು ಹೇಳಿದರು. ಶಾಲೆಗಳಲ್ಲಿ ಶುಚಿತ್ವ ಕಾಪಾಡಬೇಕು. ಉತ್ತಮ ಪರಿಸರ ಹೊಂದಿರಬೇಕು ಎಂದು ಸಲಹೆ ಮಾಡಿದರು.

ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಎಂ. ದಾನೋಜಿ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ತಮಗೆ ಆಸಕ್ತಿ ಇರುವ ಪ್ರತಿಭೆ ತೋರ್ಪಡಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಸರ್ವ ಶಿಕ್ಷಣ ಅಭಿಯಾನ ಅಧಿಕಾರಿ ಭಾಗ್ಯಲಕ್ಷ್ಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಮಡಿಕೇರಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮೆಹಬೂಬ್ ಖಾನ್, ವಿಷಯ ಪರಿವೀಕ್ಷಕ ದೇವುನಾಯಕ್, ಸಾವಿತ್ರಿ, ಅನುದಾನಿತ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಇತರರು ಇದ್ದರು.