ಮಡಿಕೇರಿ, ಅ. 16: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮ ಬಾಳಂಗಾಡುವಿನಲ್ಲಿ ಜೇನುಕುರುಬರ ರಾಜು ಎಂಬಾತ ಕುಶಾಲನಗರದ ಕಮಲ ಎಂಬ ಮಹಿಳೆಯೊಂದಿಗೆ ಸಂಸಾರ ಮಾಡಿಕೊಂಡಿದ್ದ. ತಾ. 3.9.2017ರಂದು ರಾತ್ರಿ ಕಮಲಳನ್ನು ಹತ್ಯೆಗೈದು ಮೃತದೇಹವನ್ನು ಕಾಡಿನ ಮಧ್ಯೆ ಗುಂಡಿ ತೆಗೆದು ಹೂತು ಹಾಕಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಪ್ರಭು ಅವರು ಆರೋಪಿ ರಾಜುಗೆ ಕಲಂ 235(2) ಸಿ.ಆರ್.ಪಿ.ಸಿ. ಪ್ರಕಾರ ಆರೋಪಿಗೆ ಕಲಂ 302 ಐಪಿಸಿಗೆ ಸಂಬಂಧಿಸಿ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. 5,000ಗಳ ದಂಡ, ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳು ಸಾದಾ ಕಾರಾಗೃಹ ವಾಸ, ಕಲಂ 201 ಐಪಿಸಿಗೆ ಸಂಬಂಧಿಸಿದಂತೆ 4 ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ ರೂ. 2,000 ದಂಡ, ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳು ಕಾರಾಗೃಹವಾಸ ಶಿಕ್ಷೆ ವಿಧಿಸಿದ್ದು, ಕಲಂ 377 ಐಪಿಸಿಗೆ ಸಂಬಂಧಿಸಿದಂತೆ 7 ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ ರೂ. 4,000 ದಂಡ, ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳು ಕಾರಾಗೃಹವಾಸ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗರಾಜ್ ಆಚಾರ್ ಮತ್ತು ಅಜಿತ್ ಕುಮಾರ್ ವಾದ ಮಂಡಿಸಿದರು.