ಸಿದ್ದಾಪುರ, ಅ. 16: ಪಾಲಿಬೆಟ್ಟ ವಿ.ಎಸ್.ಎಸ್.ಎನ್ ಬ್ಯಾಂಕ್ನ ಕಾರ್ಯದರ್ಶಿ ಅಡವಿಟ್ಟ ಚಿನ್ನದಲ್ಲಿ ಗ್ರಾಹಕರಿಗೆ ಅನ್ಯಾಯವೆಸಗಿದ್ದಾರೆ ಎಂದು ಪಾಲಿಬೆಟ್ಟ ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಮಹದೇವ್, ಪಾಲಿಬೆಟ್ಟ ಸಹಕಾರ ಬ್ಯಾಂಕ್ನಲ್ಲ್ಲಿ ಚಿನ್ನವನ್ನು ಅಡವಿಟ್ಟ ಗ್ರಾಹಕರಿಗೆ ಯಾವದೇ ನೋಟೀಸ್ ನೀಡದೆ ಹರಾಜು ಮಾಡಲು ಮುಂದಾಗಿದ್ದಾರೆ. ಮಾತ್ರವಲ್ಲದೇ ತಾವು ಅಡವಿಟ್ಟಿರುವ ಚಿನ್ನವು ನಕಲಿಯದ್ದು ಎಂದು ಗ್ರಾಹಕರಿಗೆ ಬೆದರಿಕೆವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು. ಅಡವಿಟ್ಟ ಚಿನ್ನವನ್ನು ಹರಾಜು ಮಾಡುವ ಮುಂಚೆ ನೋಟೀಸ್ ನೀಡಿ ಗ್ರಾಹಕರಿಗೆ ಮಾಹಿತಿಯನ್ನು ನೀಡಬೇಕು. ಆದರೇ ಬ್ಯಾಂಕ್ ಏಕಾಏಕಿ ಪತ್ರಿಕೆಯಲ್ಲಿ ಪ್ರಕಟಿಸಿ ಕೆಲವೇ ದಿನದಲ್ಲಿ ಹರಾಜನ್ನು ನಿಗದಿಪಡಿಸಿದೆ. ಮಾತ್ರವಲ್ಲದೇ ಬ್ಯಾಂಕ್ನ ಕಾರ್ಯದರ್ಶಿ ಚಿನ್ನವನ್ನು ಅಡವಿಟ್ಟ ಮಹಿಳೆಯ ಮನೆಗೆ ತೆರಳಿ ತಮ್ಮ ಚಿನ್ನವು ಸಂಪೂರ್ಣ ನಕಲಿಯಾಗಿದೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದರು.
ಸಮಿತಿಯ ಉಪಾಧ್ಯಕ್ಷ ಅಬ್ದುಲ್ ನಾಸರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಹಕಾರ ಸಂಘ ಹಾಗೂ ಬ್ಯಾಂಕ್ನಲ್ಲಿ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ತಂಗರಾಜ್, ರಶೀದ್, ಅಲೀಮ್ ಇದ್ದರು.