ಭಾಗಮಂಡಲ, ಅ. 17: ಧಾರ್ಮಿಕ ಕೈಂಕರ್ಯಗಳೊಂದಿಗೆ ವೇದ ಮಂತ್ರೋದ್ಘೋಷಗಳ ನಡುವೆ ಹೂಮಳೆಯೊಂದಿಗೆ ತಂಪಾದ ವಾತಾವರಣದಲ್ಲಿ ದಕ್ಷಿಣ ಗಂಗೆ ಶ್ರೀ ಕಾವೇರಿ ಸನ್ನಿಧಿಯಲ್ಲಿ ಇಂದು ನಿಗದಿತ 12.33 ಗಂಟೆಗೆ ಶುಭ ಧನುರ್ಲಗ್ನದಲ್ಲಿ ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥೋದ್ಭವ ನೆರವೇರಿತು. ವರ್ಷಂಪ್ರತಿಯಂತೆ ಸಪ್ತ ತೀರ್ಥ ರೂಪಿಣಿ ಕಾವೇರಿಯು ಅರ್ಚಕರಿಂದ ಮಂತ್ರಘೋಷಗಳ ಪೂಜೆ ನೆರವೇರುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರಿಂದ ಜೈಕಾರ ಹಾಗೂ ಗೋವಿಂದ ಸ್ಮರಣೆ ನಡುವೆ ಮಹಾ ಆರತಿ ನೆರವೇರುತ್ತಿದ್ದಂತೆಯೇ ತೀರ್ಥೋದ್ಭವವಾಯಿತು.ಬ್ರಹ್ಮ ಕುಂಡಿಕೆಯಿಂದ ಸದ್ಭಕ್ತರಿಗೆ ತೀರ್ಥ ಪ್ರೋಕ್ಷಣೆಯಾಗುತ್ತಿದ್ದಂತೆಯೇ ತುಂತುರು ಮಳೆ ಹನಿಯು ವರುಣ ದೇವನಿಂದ ಪುಷ್ಪವೃಷ್ಟಿಯ ಅನುಭವವಾಯಿತು. ಇತ್ತ ಸಹಸ್ರಾರು ಭಕ್ತರು ಸ್ನಾನ ಕೊಳದಲ್ಲಿ ಮಿಂದು ಪುನೀತರಾದರು.ಇಂದು ಬೆಳಿಗ್ಗೆಯಿಂದಲೇ ತುಲಾಸಂಕ್ರಮಣ ಸಲುವಾಗಿ ಕಾವೇರಿ ತೀರ್ಥ ಕುಂಡಿಕೆಯಲ್ಲಿ ಮಂಟಪ ಹಾಗೂ ಶ್ರೀ ಮಾತೆಗೆ ಚಿನ್ನಾಭರಣ ಸಹಿತ ಬೆಳ್ಳಿಯ ನಗಗಳಿಂದ ಸಿಂಗಾರಗೊಳಿಸಿ ವಿಶೇಷ ಪುಷ್ಪಾಲಂಕಾರದೊಂದಿಗೆ ಪೂಜಾ ಕೈಂಕರ್ಯ, ಪುಷ್ಪಾರ್ಚನೆ, ಕುಂಕುಮಾರ್ಚನೆ ಸೇವೆಗಳನ್ನು ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಕ್ಷೇತ್ರದ ಸ್ನಾನಕೊಳ ಹಾಗೂ ತೀರ್ಥ ಕುಂಡಿಕೆ ಸುತ್ತಲೂ ಜಮಾವಣೆಗೊಂಡು ಅಪೂರ್ವ ಕ್ಷಣವನ್ನು ಕಣ್ಮನ ತುಂಬಿಕೊಳ್ಳಲು ಕಾತರರಾಗಿದ್ದರು.

ತಲಕಾವೇರಿ ಕ್ಷೇತ್ರ ಪುರೋಹಿತ ಕುಟುಂಬದ ಹಿರಿಯರಾದ ರಾಮಕೃಷ್ಣ ಆಚಾರ್ ನೇತೃತ್ವದಲ್ಲಿ ದೇವತಾ ಕೈಂಕರ್ಯಗಳು ನೆರವೇರುತ್ತಿದ್ದಂತೆಯೇ ಶ್ರೀ ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದಾ... ಶ್ರೀ ಇಗ್ಗುತ್ತಪ್ಪ ದೇವರ ಪಾದಾರವಿಂದಕ್ಕೆ ಗೋವಿಂದಾ... ಜೈ ಜೈ ಮಾತಾ... ಕಾವೇರಿ ಮಾತಾ... ಎಂಬಿತ್ಯಾದಿ ಉದ್ಘೋಷಗಳು ಜನಸ್ತೋಮದಿಂದ ಮೊಳಗುತ್ತಲೇ ಇತ್ತು. ಇನ್ನೊಂದೆಡೆ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ದುಡಿಹಾಡು ಕೇಳಿ ಬಂದರೆ, ಮಹಿಳೆಯರು ಕೂಡ ಸಾಂಪ್ರದಾಯಿಕ ಉಡುಪು ಸಹಿತ ‘ತಳಿಯತಕ್ಕಿ ದೀಪ’ ಹಿಡಿದುಕೊಂಡು ಭಕ್ತಿ ಪೂರ್ವಕ ಭಜನೆಯಲ್ಲಿ ನಿರತರಾಗಿದ್ದರು.

ತಲಕಾವೇರಿ ಹಾಗೂ ಭಾಗಮಂಡಲ ತಕ್ಕ ಮುಖ್ಯಸ್ಥರಾದ ಕೋಡಿ ಮತ್ತು ಬಳ್ಳಡ್ಕ ಕುಟುಂಬ ಸಹಿತ ಗೌಡ ಜನಾಂಗದ ಪ್ರಮುಖರು ಕೂಡ ಸಾಂಪ್ರದಾಯಿಕ ಧಿರಿಸಿನೊಂದಿಗೆ ಐತಿಹಾಸಿಕ ಕಾವೇರಿ ತೀರ್ಥೋದ್ಭವದ ಕ್ಷಣವನ್ನು ಕಣ್ತುಂಬಿಕೊಂಡರು.

ಶ್ರೀ ಕಾವೇರಿ ತೀರ್ಥ ಕುಂಡಿಕೆ ಬಳಿ ಪುರೋಹಿತರಿಂದ ದೈವಿಕ ಕೈಂಕರ್ಯಗಳ ನಡುವೆ ದಂಪತಿ ಸಮೇತರಾಗಿ ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಂಡ್ಯದ ಅಪ್ಪಾಜಿ ಗೌಡ, ಶ್ರೀಕಂಠೇಗೌಡ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಕವಿತಾ ಪ್ರಭಾಕರ್, ಬಿ.ಎನ್. ಪ್ರಥ್ಯು, ಮಂಜುಳಾ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್, ಉಪವಿಭಾಗಾಧಿಕಾರಿ ನಂಜುಂಡೇಗೌಡ, ತಹಶೀಲ್ದಾರ್ ಕುಸುಮ ಸಹಿತ ಗಣ್ಯರು ತೀರ್ಥೋದ್ಭವ ಕ್ಷಣಕ್ಕೆ ಸಾಕ್ಷಿಯಾಗಿದ್ದು ಗೋಚರಿಸಿತು.

ತಲಕಾವೇರಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‍ನ ಸಹಕಾರದಿಂದ ಭಕ್ತಿ ಗಾಯನ ಮತ್ತು ಸಂಕ್ರಮಣ ಕವಿಗೋಷ್ಠಿ ಕಾರ್ಯಕ್ರಮವೂ ಮೂಡಿಬಂತು. ಪ್ರಸಕ್ತ ವರ್ಷದ ಹಗಲಿನಲ್ಲಿ ಮಧ್ಯಾಹ್ನ ವೇಳೆ ತೀರ್ಥೋದ್ಭವ ಹಿನ್ನೆಲೆ ಹೆಚ್ಚಿನ ಭಕ್ತರ ನಿರೀಕ್ಷೆಯೊಂದಿಗೆ ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ವಿಶೇಷ ಭದ್ರತಾ ಕ್ರಮಕೈಗೊಂಡಿದ್ದರೂ ನಿರೀಕ್ಷಿತ ಜನಸ್ತೋಮ ಕಂಡುಬರಲಿಲ್ಲ. ಕೇರಳದಿಂದ ಹೆಚ್ಚಿನ ಭಕ್ತರು ಆಗಮಿಸಿದ್ದುದು ಕಂಡುಬಂತು.

ಎಲ್.ಇ.ಡಿ. ಸ್ಕ್ರೀನ್: ಕ್ಷೇತ್ರದ ಮಹಾದ್ವಾರ ಹಾಗೂ ಕುಂಡಿಕೆ ಬಳಿ ದೊಡ್ಡದಾದ ಎಲ್.ಇ.ಡಿ. ಸ್ಕ್ರೀನ್ ಅಳವಡಿಸಿದ್ದರಿಂದ ತೀರ್ಥೋದ್ಭವದ ಕ್ಷಣಗಳನ್ನು ಭಕ್ತರು ನಿಂತಲ್ಲಿಯೇ ನೋಡಿ ಕಣ್ತುಂಬಿಕೊಂಡರು. ಇದರಿಂದಾಗಿ ನೂಕು ನುಗ್ಗಲು ಕಡಿಮೆಯಾಗಿತ್ತಾದರೂ, ಕೆಲವರು ಯುವಕರ ದಂಡು ಮಾತ್ರ ಬ್ಯಾರಿಕೇಡನ್ನು ಏರಿ ಕುಂಡಿಕೆಯತ್ತ ಧಾವಿಸಲು ಪ್ರಯತ್ನಿಸುತ್ತಿದ್ದರು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.

ಗ್ಯಾಲರಿ ಫುಲ್: ಕುಂಡಿಕೆ ಬಳಿ ಮಾಧ್ಯಮದವರು ಹಾಗೂ ಗಣ್ಯರಿಗೆಂದು ಗ್ಯಾಲರಿ ನಿರ್ಮಿಸಲಾಗಿತ್ತು. ವರ್ಷಂಪ್ರತಿ ಗ್ಯಾಲರಿ ಇರುತ್ತದೆ. ಪಾಸ್ ಇದ್ದವರನ್ನು ಒಳಬಿಡಲಾಗುತ್ತದೆ. ಆದರೆ ಈ ಬಾರಿ ಗ್ಯಾಲರಿಯಲ್ಲಿ ಮಾಧ್ಯಮದವರಿಗೆ ಜಾಗವೇ ಇರಲಿಲ್ಲ. ಎಲ್ಲರೂ ಬ್ಯಾರಿಕೇಡ್‍ನಿಂದ ನುಸುಳಿ ಬಂದು ತುಂಬಿದ್ದರು.

ಅನ್ನದಾನ: ಕೊಡಗು ಏಕೀಕರಣ ರಂಗ, ಕೊಡಗು ಗೌಡ ಯುವ ವೇದಿಕೆ, ಬಂಟರ ಸಂಘ ಜಂಟಿಯಾಗಿ ವಿವಿಧ ದಾನಿಗಳ ನೆರವಿನೊಂದಿಗೆ ನಿನ್ನೆಯಿಂದಲೇ ಅನ್ನದಾನ, ಇಂದು ಬೆಳಿಗ್ಗೆ ಕಾಫಿ,

(ಮೊದಲ ಪುಟದಿಂದ) ಉಪಾಹಾರ, ಮಧ್ಯಾಹ್ನ ಬೋಜನಕ್ಕೆ ತಯಾರಿ ಮಾಡಿಕೊಂಡಿದ್ದು, ನಿರಂತರ ಭಕ್ತರು ಸರದಿಯಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದುದು ಕಂಡುಬಂತು. ಈ ಸಂಘಟನೆಗಳಿಂದ ಮುಂದಿನ ಕಿರು ಸಂಕ್ರಮಣದವರೆಗೂ ಅನ್ನಸಂತರ್ಪಣೆ ಏರ್ಪಾಡಾಗಿದೆ.

ಇನ್ನು ಮಂಡ್ಯದ ಶ್ರೀ ಕಾವೇರಿ ಸಂಕ್ರಮಣ ಅನ್ನ ಸಂತರ್ಪಣಾ ಸಮಿತಿ ಹಾಗೂ ಕೈಲಾಸ ಆಶ್ರಮದ ಕಡೆಯಿಂದಲೂ ಪ್ರತ್ಯೇಕ ಆಹಾರ ವಿತರಣಾ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಗರ್‍ಗರ್ ಕಾಫಿ: ಕಾಫಿ ರಾಷ್ಟ್ರೀಯ ಪಾನೀಯ ಬೇಡಿಕೆಯೊಂದಿಗೆ ಆಂದೋಲನ ರೂಪಿಸಿರುವ ಮಾಚಿಮಂಡ ಎಂ. ರವೀಂದ್ರ ತಂಡದಿಂದ ‘ಹರ್‍ಹರ್ ಕಾವೇರಿ-ಗರ್‍ಗರ್ ಕಾಫಿ’ ಘೋಷಣೆಯೊಂದಿಗೆ ಯಾತ್ರೆ ತೀರ್ಥಯಾತ್ರೆ ಮಾಡಬಾರದೆಂಬ ವಿರೋಧವಿದ್ದರೂ ಇಂದು ವಿವಿಧ ಸಂಘಟನೆಗಳು ನೂರಾರು ವಾಹನಗಳಲ್ಲಿ ದೊಡ್ಡ ದೊಡ್ಡ ಟ್ಯಾಂಕ್‍ಗಳಲ್ಲಿ ತೀರ್ಥವನ್ನು ತುಂಬಿಕೊಂಡು ಹೋಗಿ ಆಯಾ ಊರಿನಲ್ಲಿ ತೀರ್ಥ ವಿತರಣೆ ಮಾಡಿದರು. ಭಾಗಮಂಡಲದ ಹತ್ತಿರದ ಚೇರಂಬಾಣೆಯಲ್ಲೂ ಕೂಡ ತೀರ್ಥ ವಿತರಣೆ ಮಾಡುತ್ತಿದ್ದು, ಜನರು ರಸ್ತೆ ಬದಿ ಪಾತ್ರೆ, ಬಾಟಲಿ ಹಿಡಿದು ನಿಂತದ್ದುದು ಕಂಡುಬಂತು.