ವೀರಾಜಪೇಟೆ ಅ. 17 : ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ಬಾಲಕೀಯರ ಹ್ಯಾಂಡ್ ಬಾಲ್ ತಂಡವು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಗೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಈಚೆಗೆ ಮಾದಾಪುರದ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2017-18 ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಂಡವು ಪ್ರಥಮ ಸ್ಥಾನಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಗೊಂಡಿದೆ. ಅಂತಿಮ ಪಂದ್ಯದಲ್ಲಿ ಸಂತ ಅನ್ನಮ್ಮ ಪ್ರೌಢಶಾಲೆಯ ತಂಡವು 7-0 ಗೋಲುಗಳಿಂದ ಸೋಮವಾರಪೇಟೆ ಮೂಕಾಂಬಿಕ ಪ್ರೌಢಶಾಲಾ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ವಿಭಾಗೀಯ ಮಟ್ಟದ ಪಂದ್ಯಾಟಗಳು ತಾ. 23 ರಿಂದ ಮೈಸೂರಿನಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಂತ ಅನ್ನಮ್ಮ ಪ್ರೌಢಶಾಲೆಯ ಬಾಲಕರ ತಂಡವು ಬ್ಯಾಡ್‍ಮಿಂಟನ್‍ನಲ್ಲಿ ದ್ವಿತೀಯ ಸ್ಥಾನ ಪಡೆದರೆ, ಚೆಸ್‍ನಲ್ಲಿ ಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಹಾಗೂ ಅಥ್ಲೆಟಿಕ್ಸ್‍ನಲ್ಲಿ ಕೆ. ಜಿ. ನಿತ್ಯ, ಭಾರದ ಗುಂಡು ಎಸೆತದಲ್ಲಿ ಜಿಲ್ಲಾ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಕ ಜೀವನ್ ಲೋಬೋ ತಿಳಿಸಿದ್ದಾರೆ.