ಮಡಿಕೇರಿ, ಅ.17 : ಕಾರ್ಮಿಕರ ಸೋಗಿನಲ್ಲಿ ಕೊಡಗು ಜಿಲ್ಲೆಯನ್ನು ಪ್ರವೇಶಿಸಿರುವ ಬಾಂಗ್ಲಾ ವಲಸಿಗರ ಬಗ್ಗೆ ತೋಟದ ಮಾಲೀಕರು ಎಚ್ಚತ್ತುಕೊಳ್ಳಬೇಕೆಂದು ಕರೆ ನೀಡಿರುವ ಕಡಗದಾಳು ಗ್ರಾ.ಪಂ ಉಪಾಧ್ಯಕ್ಷರಾದ ಮಾದೇಟಿರ ತಿಮ್ಮಯ್ಯ, ಕಾನೂನು ಬಾಹಿರವಾಗಿ ನೆಲೆ ನಿಂತಿರುವ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಂಚಾಯಿತಿ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಸ್ವಾರ್ಥಕ್ಕಾಗಿ ಕೆಲವು ತೋಟದ ಮಾಲೀಕರು ಬಾಂಗ್ಲಾ ವಲಸಿಗರಿಗೆÀ ಆಶ್ರಯ ಮತ್ತು ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕಡಗದಾಳು ಪಂಚಾಯಿತಿ ವಲಸಿಗರ ಬಗ್ಗೆ ಜಾಗೃತಗೊಂಡಿದ್ದು, ವಲಸಿಗರಿಗೆ ರಕ್ಷಣೆ ನೀಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿದೆ ಎಂದರು. ಕಾಫಿ ತೋಟ ಕಾರ್ಮಿಕರ ಸೋಗಿನಲ್ಲ್ಲಿ ಬಂದು ಸೇರಿಕೊಳ್ಳುತ್ತಿರುವ ಬಾಂಗ್ಲಾ ದೇಶಿಗರು ನಂತರದ ದಿನಗಳಲ್ಲಿ ಸ್ಥಳೀಯ ಜನರ ಸಂಪರ್ಕ ಬೆಳಸಿ ಕೊಂಡು ಆಧಾರ್ ಕಾರ್ಡ್ ಸೇರಿದಂತೆ ಮೂಲ ದಾಖಲಾತಿಗಳನ್ನು ಅಕ್ರಮವಾಗಿ ಪಡೆದು ಭಾರತ ದೇಶದಲ್ಲೇ ಶಾಶ್ವತವಾಗಿ ನೆಲೆ ಯೂರುವ ಹುನ್ನಾರ ತೆರೆಮರೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ಕೆಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸಹಕಾರ ನೀಡುತ್ತಿರುವದು ಗಮನಕ್ಕೆ ಬಂದಿದೆ ಎಂದು ತಿಮ್ಮಯ್ಯ ಆರೋಪಿಸಿದರು.
ಅಕ್ರಮ ವಲಸಿಗರಿಂದ ಮುಂದೊಂದು ದಿನ ಜಿಲ್ಲೆಗೆ ಅಪಾಯ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿ ರುವ ಅವರು ಇದೇ ಕಾರಣಕ್ಕೆ ಕಡಗದಾಳು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಾ.11 ರಂದು ನಡೆಸಿದ ಸಾಮಾನ್ಯ ಸಭೆಯಲ್ಲಿ ಕಠಿಣ ಕ್ರಮದ ನಿರ್ಧಾರ ಕೈಗೊಂಡಿದೆ ಎಂದರು.
ಅಸ್ಸಾಂ ರಾಜ್ಯದವರೆಂದು ಹೇಳಿಕೊಂಡು ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಕಾಫಿ ತೋಟಗಳಲ್ಲಿ ಈಗಾಗಲೇ ಬಾಂಗ್ಲಾ ದೇಶದ ಅಕ್ರಮ ವಲಸಿಗರು ನೆಲೆಸಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಪಂಚಾಯಿತಿ ನಿರ್ಧಾರಕ್ಕೆ ತೋಟದ ಮಾಲೀಕರು ಹಾಗೂ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಡಗದಾಳು ಮಾತ್ರವಲ್ಲದೆ ಜಿಲ್ಲೆಯ ಹಲವಾರು ತೋಟಗಳಲ್ಲಿ ಅಕ್ರಮ ವಲಸಿಗರು ಬಂದು ನೆಲೆಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿ.ಪಂ, ಮೂರು ತಾ.ಪಂ ಹಾಗೂ ಜಿಲ್ಲೆಯ ಶಾಸಕರುಗಳು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದರು.
ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತೋಟಗಳಲ್ಲಿ ನೆÀಲೆÀಸಿರುವ ಬಾಂಗ್ಲಾ ದೇಶಿ ಅಕ್ರಮ ವಲಸಿಗರ ಬಗ್ಗೆ ಪಂಚಾಯಿತಿ ಕಚೇರಿಗೆ ಮಾಹಿತಿ ನೀಡುವಂತೆ ಸೂಚಿಸಿ ತೋಟದ ಮಾಲೀಕರಿಗೆ ತಿಳುವಳಿಕೆ ಪತ್ರ ನೀಡಲಾಗಿದೆ. ದಾಖಲಾತಿಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಮೂಲಕ ಪರಿಶೀಲಿಸಿ ಭಾರತೀಯರೆ ಅಥವಾ ವಲಸಿಗರೆ ಎಂದು ಖಾತ್ರಿ ಪಡಿಸಿ ಕೊಂಡು ಕ್ರಮಕ್ಕೆ ಮುಂದಾಗುವದಾಗಿ ತಿಮ್ಮಯ್ಯ ಹೇಳಿದರು. ತೋಟದ ಮಾಲೀಕರು ಮಾಹಿತಿ ನೀಡದೆ ತಮ್ಮ ಲಾಭಕ್ಕೆ ಈ ಅಕ್ರಮ ವಲಸಿಗರನ್ನು ರಕ್ಷಿಸಲು ಮುಂದಾದಲ್ಲಿ ಪಂಚಾಯಿತಿ ಕ್ರಿಮಿನಲ್ ಮೊಕ್ಕದ್ದಮೆಯನ್ನು ಹೂಡಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರುಗಳಾದ ಪೊನ್ನಚೆಟ್ಟಿರ ರಮೇಶ್, ರಮೇಶ್ ರೈ, ರಮೇಶ್ ಆಚಾರ್ಯ ಹಾಗೂ ಪುಷ್ಪಾವತಿ ರೈ ಉಪಸ್ಥಿತರಿದ್ದರು.