ಗೋಣಿಕೊಪ್ಪಲು,ಅ.16: ಕೇಂದ್ರ ಸರ್ಕಾರದ ಉಚಿತ ವಿದ್ಯುತ್ ಸಂಪರ್ಕ ಯೋಜನೆಯಲ್ಲಿ ಸುಮಾರು 18,000 ಗ್ರಾಮಗಳನ್ನು ಗುರುತಿಸಲಾಗಿದ್ದು, ಈವರೆಗೆ ಸುಮಾರು 14 ಸಾವಿರಕ್ಕೂ ಅಧಿಕ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 5 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ಧೇಶವಿದ್ದು, ಸುಮಾರು ರೂ.16,000 ಕೋಟಿ ವೆಚ್ಚ ಮಾಡಲಾಗಿದೆ ಎಂದು ಕೊಡಗು ಮೈಸೂರು ಸಂಸದ ಹಾಗೂ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ವಿವರಿಸಿದರು.
ಪಾಲಿಬೆಟ್ಟ ಮಹಿಳಾ ಸಮಾಜ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಫಲಾನುಭವಿಗಳಿಗೆ ಉಜ್ವಲ ಯೋಜನೆಯಲ್ಲಿ ಉಚಿತ ಅನಿಲ ಸಂಪರ್ಕ ವಿತರಿಸಿ ಅವರು ಮಾತನಾಡಿದರು.
ದೇಶದ ದುರ್ಬಲ ಮತ್ತು ಬಡವರ್ಗದ ಆರೋಗ್ಯ ಸಂರಕ್ಷಣೆಗಾಗಿ ಕ್ಯಾನ್ಸರ್ ಇತ್ಯಾದಿ ಮಾರಕ ರೋಗಗಳ ಔಷಧಿಯನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಸುಮಾರು ರೂ.15 ಸಾವಿರ ಮುಖಬೆಲೆಯ ಔಷಧಿ ಇದೀಗ ರೂ.3,500 ಮೊತ್ತಕ್ಕೆ ಕೈಗೆಟುಕುತ್ತಿದೆ. ಕೆಲವೊಂದು ದುಬಾರಿ ದರದ ‘ಇನ್ಸುಲಿನ್’ಗಳು ರೂ.250 ಮೊತ್ತಕ್ಕೆ ಬಡವರ ಕೈಗೆಟುಕುತ್ತಿದೆ. ಆರೋಗ್ಯವಂತ ಸಮಾಜದತ್ತ ನರೇಂದ್ರ ಮೋದಿ ಚಿತ್ತಹರಿಸಿದ್ದು ಇದರ ಸದುಪಯೋಗವನ್ನು ಎಲ್ಲರೂ ಹೊಂದಲು ಕರೆ ನೀಡಿದರು.
ಕೊಡಗು ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಯೂ ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರನ್ನು ಆಯ್ಕೆ ಮಾಡಿ ಕಳುಹಿಸಲು ಇದೇ ಸಂದರ್ಭ ಮನವಿ ಮಾಡಿದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೇರಳದಲ್ಲಿ ಪ್ರಕರಣವೊಂದರಲ್ಲಿ ಆರೋಪಿ ಯಾಗಿರುವ ವ್ಯಕ್ತಿ ಇಂದು ಕರ್ನಾಟಕ ದಲ್ಲಿ ಕಾಂಗ್ರೆಸ್ ವೀಕ್ಷಕರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯ ಸರ್ಕಾರ ಅಸ್ತಿತ್ವ ಹೊಂದಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮೋದಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಇದರ ಸದುಪಯೋಗವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿ ಪಡೆದುಕೊಳ್ಳು ವಂತಾಗಬೇಕು. ಉಜ್ವಲ ಯೋಜನೆ ಯ ಲಾಭವನ್ನು ಹೊಂದಿಕೊಳ್ಳಲು ಮನವಿ ಮಾಡಿದರು.
ಪಾಲಿಬೆಟ್ಟ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಟಿ.ಜಿ.ವಿಜೇಶ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ, ಉಪಾಧ್ಯಕ್ಷ ನೆಲ್ಲೀರ ಚಲನ್, ಎಪಿಎಂಸಿ ಅಧ್ಯಕ್ಷ ಮಾಚಿಮಂಡ ಸುವಿನ್‍ಗಣಪತಿ, ಜಿ.ಪಂ.ಸದಸ್ಯ ವಿಜು ಸುಬ್ರಮಣಿ, ಹೊಸೂರು ಗ್ರಾ.ಪಂ.ಅಧ್ಯಕ್ಷ ಗೋಪಿ ಚಿಣ್ಣಪ್ಪ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅರುಣ್‍ಭೀಮಯ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಹಾಗೂ ಮಡಿಕೇರಿ ತಾಲ್ಲೂಕು ಚುನಾವಣಾ ಉಸ್ತುವಾರಿ ಜಪ್ಪು ಅಚ್ಚಪ್ಪ ಉಪಸ್ಥಿತರಿದ್ದರು.
ಸ್ವಾಗತ, ಪ್ರಾಸ್ತಾವಿಕ ಹಾಗೂ ವಂದನಾರ್ಪಣೆಯನ್ನು ಕುಟ್ಟಂಡ ಅಜಿತ್ ಕರುಂಬಯ್ಯ ನಿರ್ವಹಿಸಿದರು. ಇದೇ ಸಂದರ್ಭ ಸುಮಾರು 300 ಫಲಾನುಭವಿಗಳಲ್ಲಿ ಮೊದಲ ಹಂತವಾಗಿ ಹೊಸೂರು ಮತ್ತು ಪಾಲಿಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಸುಮಾರು 30 ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕವನ್ನು ಪ್ರತಾಪ್ ಸಿಂಹ ಹಾಗೂ ಕೆ.ಜಿ. ಬೋಪಯ್ಯ ವಿತರಿಸಿದರು. - ಟಿ.ಎಲ್.ಶ್ರೀನಿವಾಸ್