ಸೋಮವಾರಪೇಟೆ, ಅ. 17: ಕೊಡಗಿನ ಮಟ್ಟಿಗೆ ಅಷ್ಟೊಂದು ಪರಿಚಿತವಲ್ಲದ ಬಾಡಿ ಶೋ ಸ್ಪರ್ಧೆಯಲ್ಲಿ ಭಾಗವಹಿಸಿದ ಜಿಲ್ಲೆಯ ಯುವಕನೋರ್ವ ವಿಶ್ವವಿದ್ಯಾಲಯ ಮಟ್ಟದ ಬಾಡಿ ಶೋ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನನಾಗಿದ್ದಾರೆ.

ಈತನ ಸಾಧನೆಗೆ ತಾಲೂಕಿನ ತಲ್ತರೆ ಅಭಿಮಠ ಬಾಚಳ್ಳಿ ಗ್ರಾಮದ ಚೌಡೇಶ್ವರಿ ಯುವಕ ಸಂಘದ ಪದಾಧಿಕಾರಿಗಳು ಮತ್ತು ಪಟ್ಟಣದ ಸಾರ್ವಜನಿಕರು ಇಲ್ಲಿನ ಪತ್ರಿಕಾಭವನ ದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಸಮೀಪದ ಆಲೇಕಟ್ಟೆ ಗ್ರಾಮದ ಕೆ.ಜೆ. ಮಹೇಶ್ ಮತ್ತು ರೇಣುಕಾ ದಂಪತಿ ಪುತ್ರ, ಸಂತ ಜೋಸೆಫರ ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿ ಕೆ.ಎಂ. ರತನ್ ವಿಶ್ವ ವಿದ್ಯಾಲಯ ಮಟ್ಟದ ಕಾಲೇಜುಗಳ ನಡುವಿನ ಬಾಡಿ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ 2ನೇ ಸ್ಥಾನ ಪಡೆದಿದ್ದಾನೆ.

ಉಡುಪಿ ಅಜ್ಜರಕಾಡು ಪಟ್ಟಣದ ಟೌನ್ ಹಾಲ್‍ನಲ್ಲಿ ಆಯೋಜಿಸ ಲಾಗಿದ್ದ ಸ್ಪರ್ಧೆಯಲ್ಲಿ ಕೊಡಗಿನಿಂದ ಏಕೈಕ ಸ್ಪರ್ಧಿಯಾಗಿ ಭಾಗವಹಿಸಿದ್ದ ರತನ್, 65 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಭಾಜನನಾಗಿದ್ದಾನೆ. ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿರುವ ಮಾರುತಿ ಜಿಮ್‍ನಲ್ಲಿ ಕಿಬ್ಬೆಟ್ಟ ಮಧು ಅವರಿಂದ ತರಬೇತಿ ಪಡೆದಿರುವ ಈತ, 30 ಮಂದಿ ಸ್ಪರ್ಧಿಗಳ ನಡುವೆ ದ್ವಿತೀಯ ಸ್ಥಾನ ಪಡೆದಿದ್ದಾನೆ.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಚೌಡೇಶ್ವರಿ ಯುವಕ ಸಂಘ ಮತ್ತು ಸಾರ್ವಜನಿಕರು ಸನ್ಮಾನಿಸಿದರು. ಈ ಸಂದರ್ಭ ಯುವಕ ಸಂಘದ ಅಧ್ಯಕ್ಷ ಈಶ್ವರ್, ನಿರ್ದೇಶಕ ರವಿ, ಆಟೋ ಚಾಲಕರ ಸಂಘದ ಮಾಜೀ ಅಧ್ಯಕ್ಷ ಉಮೇಶ್, ಪದಾಧಿಕಾರಿ ಮಂಜುನಾಥ್, ಮಹೇಶ್, ಯುವಕ ಸಂಘದ ಹೆಚ್.ಪಿ. ಸುರೇಶ್, ರಾಕೇಶ್, ಕಾಂತರಾಜ್, ಮೂರ್ತಿ, ತಿಮ್ಮಯ್ಯ, ಶಿವಣ್ಣ ಸೇರಿದಂತೆ ಇತರರು ಅಭಿನಂದಿಸಿದರು.