ಗೋಣಿಕೊಪ್ಪಲು, ಅ. 17: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾನೂರು-ವಡ್ಡರಮಾಡು ಜಂಕ್ಷನ್ ನಿಂದ ಕೊಟ್ಟಗೇರಿವರೆಗೆ ಸುಮಾರು 3 ಕಿ.ಮೀ. ಜಿ.ಪಂ.ರಸ್ತೆ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆಯ ವಿಶೇಷ ಪ್ಯಾಕೇಜ್ ಅನುದಾನ ರೂ. 1 ಕೋಟಿ (ಅಪೆಂಡಿಕ್ಸ್ ಇ) ಬಿಡುಗಡೆ ಗೊಂಡಿದ್ದು ತಾ. 14 ರಂದು ಜಿ. ಪಂ. ಸದಸ್ಯ ಬಿ. ಎನ್. ಪ್ರಥ್ಯು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಒಗ್ಗೂಡಿ ಭೂಮಿ ಪೂಜೆ ನೆರವೇರಿಸಿದರು.

ಗುದ್ದಲಿ ಪೂಜೆ ಮತ್ತು ರಾಜಕಾರಣ

ಇಂದಿನ ಪೂಜೆಗೆ ವೀರಾಜಪೇಟೆ ಶಾಸಕರನ್ನು ಆಹ್ವಾನಿಸದಿರುವ ಬಗ್ಗೆ ಅಲ್ಲಿನ ಬಿಜೆಪಿ ಪ್ರಮುಖರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಜೆಡಿಎಸ್ ಪ್ರಮುಖ ಮಾಚಂಗಡ ಮಾಚಯ್ಯ ಹಾಗೂ ಕಾಂಗ್ರೆಸ್ ಪ್ರಮುಖರಾದ ಆದೇಂಗಡ ವಿನು ಉತ್ತಪ್ಪ ಅವರ ಉಸ್ತುವಾರಿ ಸಚಿವರ ಆಪ್ತ ಹರೀಶ್ ಬೋಪಣ್ಣ ಮೂಲಕ ಅನುದಾನ ಬಿಡುಗಡೆ ಯಾಗಿರುವದಾಗಿ ಈ ಸಂದರ್ಭ ಪ್ರಕಟಿಸಿದರು. ಮಾಜಿ ಗ್ರಾ.ಪಂ.ಅಧ್ಯಕ್ಷ ಅರಮಣಮಾಡ ಸತೀಶ್ ದೇವಯ್ಯ, ಬಿಜೆಪಿ ಪ್ರಮುಖರಾದ ಎಪಿಎಂಸಿ ಸದಸ್ಯ ಮಾಚಂಗಡ ಸುಜಾ ಪೂಣಚ್ಚ ಮತ್ತು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಾಚಂಗಡ ಉಮೇಶ್ ಮುತ್ತಣ್ಣ ಅವರು ಪ್ರತಿಕ್ರಿಯೆ ನೀಡಿ ಉದ್ಧೇಶಿತ ರಸ್ತೆ ಕಾಮಗಾರಿಗೆ ನಿಧಾನವಾಗಿ ಯಾದರೂ ಹಣ ಬಿಡುಗಡೆ ಯಾಗಿದ್ದು ಈ ಹಿಂದೆ ವೀರಾಜಪೇಟೆ ಶಾಸಕ ಕೆ. ಜಿ. ಬೋಪಯ್ಯ ಅವರು ಇಲ್ಲಿನ ಸಮುದಾಯ ಭವನ ಉದ್ಘಾಟನೆ ಸಂದರ್ಭ 3 ಕಿ.ಮೀ. ಸುಸಜ್ಜಿತ ರಸ್ತೆಗೆ ‘ಅಪೆಂಡಿಕ್ಸ್ ಇ’ ಪ್ರಕಾರ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಿದ್ದರು ಎಂದು ಮಾಹಿತಿ ನೀಡಿದರು.

ಜೆಡಿಎಸ್ ಪ್ರಮುಖ ಮಾಚಂಗಡ ಮಾಚಯ್ಯ ಅವರು, ಉಸ್ತುವಾರಿ ಮಂತ್ರಿ ಆಪ್ತ ಹರೀಶ್ ಬೋಪಣ್ಣ ಅವರ ಪ್ರಯತ್ನದಿಂದಾಗಿ ಬಾಳೆಲೆ ಹಾಗೂ ನಿಟ್ಟೂರು ವ್ಯಾಪ್ತಿಗೆ ಹಲವಷ್ಟು ಅನುದಾನ ಬಿಡುಗಡೆ ಯಾಗುತಿದೆ ಎಂದರು. ಕೊಟ್ಟಗೇರಿಗೆ ಉತ್ತಮ ರಸ್ತೆಯ ನಿಟ್ಟಿನಲ್ಲಿ ರಾಜಕೀಯ ರಹಿತವಾದ ಕಾರ್ಯಕ್ರಮವೆಂದು ಇಲ್ಲಿಗೆ ಬಂದಿದ್ದೇವೆ. ಶಾಸಕ ಬೋಪಯ್ಯ ಅವರ ಕಡೆಗಣನೆ ಸರಿಯಲ್ಲ ಎಂದು ಬಿಜೆಪಿ ಪ್ರಮುಖರು ಕೂಡಲೆ ಪ್ರತಿರೋಧ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪ್ರಮುಖ ವಿನು ಉತ್ತಪ್ಪ ಅವರು, ಗ್ರಾಮೀಣ ಭಾಗಕ್ಕೆ ಒಂದು ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆಯಾಗುತ್ತಿರುವದಕ್ಕೆ ನಾವೆಲ್ಲಾ ಖುಷಿ ಪಡಬೇಕು. ಈ ರಸ್ತೆಗೆ ಅನುದಾನ ಬಿಡುಗಡೆ ಮಾಡಲು ಬೆಂಗಳೂರು ಲೋಕೋಪಯೋಗಿ ಸಚಿವಾಲಯದ ಕಾರ್ಯದರ್ಶಿ ಯಾಗಿ ನಿವೃತ್ತಿ ಹೊಂದಿದ ಚೊಟ್ಟೆಯಂಡಮಾಡ ರಾಜೇಂದ್ರ ಅವರ ಶ್ರಮವನ್ನು ನಾವಿಂದು ಶ್ಲಾಘಿಸಬೇಕಾಗಿದೆ. ಕೊಡಗು ಜಿಲ್ಲೆಯ ವಿವಿಧೆಡೆ ಕಾಮಗಾರಿಗೆ ಕೋಟಿಗಟ್ಟಲೆ ಅನುದಾನ ಬಿಡುಗಡೆಯಾಗುತ್ತಿರು ವದು ಇವರ ಪ್ರಯತ್ನದಿಂದ. ಇಲ್ಲಿ ರಾಜಕೀಯ ಮಾತನಾಡುವದು ಬೇಡ ಎಂದು ಹೇಳಿದರು.

ಈ ಹಂತದಲ್ಲಿ ಅಭಿಪ್ರಾಯ ಮುಂದಿಟ್ಟ ಜಿ. ಪಂ. ಸದಸ್ಯ ಬಿ. ಎನ್. ಪ್ರಥ್ಯು ಜಿ. ಪಂ. ಸದಸ್ಯನಾಗಿದ್ದರೂ ನಿಟ್ಟೂರು ಗ್ರಾ. ಪಂ. ವ್ಯಾಪ್ತಿಯ ಹಲವು ಸರ್ಕಾರಿ ಕಾರ್ಯಕ್ರಮಕ್ಕೆ ತನ್ನನ್ನು ಕಡೆಗಣಿಸಿ, ಬಿಜೆಪಿ ಕಾರ್ಯಕ್ರಮ ಎಂದು ಬಿಂಬಿಸಲಾಗಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳನ್ನೂ ಕರೆಯುವ ಸೌಜನ್ಯ ಅಳವಡಿಸಿ ಕೊಳ್ಳಬೇಕಾಗಿದೆ ಎಂದು ನುಡಿದರು. ಬಾಳೆಲೆ ಬಿಜೆಪಿ ಪ್ರಮುಖ ಅಳಮೇಂಗಡ ಬೋಸ್ ಮಂದಣ್ಣ ಹಾಗೂ ಉಮೇಶ್ ಮುತ್ತಣ್ಣ ಅವರು ಇನ್ನು ಮುಂದೆ ಯಾವದೇ ಜನಪ್ರತಿನಿಧಿಯ ಕಡೆಗಣನೆ ಬೇಡ. ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವ. ರಸ್ತೆ ಕಾಮಗಾರಿ ಸಂದರ್ಭ ತೋಟ ಮಾಲೀಕರು ರಸ್ತೆಗೆ ಹಾಕಿರುವ ಕಾಫಿ ತೋಟದ ಬೇಲಿಯನ್ನು ತೆರವು ಮಾಡಿ ರಸ್ತೆ ಅಗಲೀಕರಣಕ್ಕೆ ಸಹಕರಿಸಲು ಮನವಿ ಮಾಡಿದರು.

ರಸ್ತೆ ಕಾಮಗಾರಿಯನ್ನು ಗೋಣಿಕೊಪ್ಪಲಿನ ವಿವಿಟಿ ಕನ್ಸ್‍ಟ್ರಕ್ಷನ್‍ಗೆ ಗುತ್ತಿಗೆ ನೀಡಲಾಗಿದೆ. ಗುದ್ದಲಿಪೂಜೆ ಸಂದರ್ಭ ನಿಟ್ಟೂರು ಗ್ರಾ.ಪಂ.ಉಪಾಧ್ಯಕ್ಷ ಪವನ್ ಚಿಟ್ಟಿಯಪ್ಪ, ಸದಸ್ಯರಾದ ಲಲ್ಲೂ ಗಂಗಮ್ಮ, ಅಳಮೇಂಗಡ ಸುರೇಶ್, ಮಾಚಂಗಡ ಪೂಣಚ್ಚ ಮುಂತಾದವರು ಉಪಸ್ಥಿತರಿದ್ದರು.

-ಟಿ. ಎಲ್. ಶ್ರೀನಿವಾಸ್