ಸೋಮವಾರಪೇಟೆ, ಅ. 19: ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ಕೊಡ್ಲಿಪೇಟೆ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಮರಳು ದಂಧೆಗೆ ಕಡಿವಾಣ ಹಾಕಿದ್ದ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಅವರು ದಂಧೆ ಕೋರರಿಗೆ ಸಿಂಹಸ್ವಪ್ನವಾಗಿ ದ್ದರು. ಇದರೊಂದಿಗೆ ಕೇಸ್ ದಾಖಲಿಸಿ ಕ್ರಮಕೈಗೊಂಡಿದ್ದರು. ರೌಡಿಶೀಟರ್‍ಗಳಾಗಿರುವ ಮರಳು ಮಾಫಿಯಾ ಜನಪ್ರತಿನಿಧಿಯೊಬ್ಬರ ಮೂಲಕ ಇವರನ್ನು ವರ್ಗಾವಣೆ ಗೊಳಿಸಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಕೊಡ್ಲಿಪೇಟೆಯಲ್ಲಿ ಮರಳು ಮಾಫಿಯಾ ವಿರುದ್ಧ ಹೋರಾಟ ಮಾಡಿದ್ದ ಕರವೇ ಮುಖಂಡ ಭೂಪಾಲ್ ಅವರ ಮೇಲೆ ರಬ್ಬರ್‍ಗುಂಡು ಹಾರಿಸಲಾಗಿತ್ತು. ಇದೀಗ ಮರಳು ಮಾಫಿಯಾದವರೇ ನಿಷ್ಠಾವಂತ ಅಧಿಕಾರಿಯನ್ನು ಎತ್ತಂಗಡಿ ಮಾಡಿಸಿದ್ದಾರೆ. ಪೊಲೀಸ್ ಇಲಾಖೆ ಇವರುಗಳ ಎದುರು ಮಂಡಿಯೂರಿರುವಂತೆ ಕಂಡು ಬರುತ್ತಿದ್ದು, ತಾಲೂಕಿನಲ್ಲಿ ದಕ್ಷ ಅಧಿಕಾರಿಗಳಿಗೆ ನೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿದ್ದ ಕರವೇ ನಗರಾಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ಕಾರ್ಯದರ್ಶಿ ಕಲ್ಕಂದೂರು ರವೀಶ್, ತಾಲೂಕು ಉಪಾಧ್ಯಕ್ಷ ಚಂದ್ರು ಉಪಸ್ಥಿತರಿದ್ದರು.