ಸುಂಟಿಕೊಪ್ಪ, ಅ. 19: ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿಯು ಸುಂಟಿಕೊಪ್ಪ ಹೋಬಳಿ ಘಟಕದ ವತಿಯಿಂದ ಇಲ್ಲಿನ ಕನ್ನಡ ವೃತ್ತದಲ್ಲಿ ಮಾನವ ಸರಪಳಿ, ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ತಾಲೂಕು ಹೋರಾಟ ಕೇಂದ್ರೀಯ ಸಮಿತಿಯ ಸದಸ್ಯ ಡಿ.ನರಸಿಂಹ ಮಾತನಾಡಿದರು. ಕೇಂದ್ರೀಯ ಸಮಿತಿ ಸದಸ್ಯ ಕೆ. ಉಸ್ಮಾನ್, ತಾಲೂಕು ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಜಿ.ಪಂ. ಸದಸ್ಯ ಪಿ.ಎಂ.ಲತೀಫ್, ಸಮಿತಿಯ ಗೌರವಾ ಧ್ಯಕ್ಷ ಯಂಕನ ಎಂ.ಕರುಂಬಯ್ಯ ಮಾತನಾಡಿದರು. ಇಲ್ಲಿನ ಕನ್ನಡ ವೃತ್ತದಲ್ಲಿ ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಲಾಯಿತು. ನಂತರ ಪ್ರಮುಖ ಪಟ್ಟಣದಲ್ಲಿ ಘೋಷಣೆ ಕೂಗುತ್ತಾ, ರಾಜ್ಯ ಸರ್ಕಾರಕ್ಕೆ ಮನವಿಯ ಅಂಚೆ ಕಾರ್ಡನ್ನು ಹಿಡಿದು ಮೆರವಣಿಗೆ ಮೂಲಕ ಸಾಗಿ ಅಂಚೆ ಡಬ್ಬಿಗೆ ಪತ್ರವನ್ನು ಹಾಕುವದರೊಂದಿಗೆ ಪ್ರತಿಭಟನೆಗೆ ಮುನ್ನುಡಿ ಹಾಕಲಾಯಿತು.
ಸುಂಟಿಕೊಪ್ಪ ಘಟಕದ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್, ಕಾರ್ಯದರ್ಶಿ ಪಿ. ಆರ್.ಸುನಿಲ್ ಕುಮಾರ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರಾದ ಕೆ.ಇ. ಕರೀಂ, ಬಿ.ಎಂ. ಸುರೇಶ್, ರಜಾಕ್, ನಾಗರತ್ನ, ಚಂದ್ರ, ಕರವೇ ಅಧ್ಯಕ್ಷ ನಾಗೇಶ್ ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ತಾಲೂಕು ಹೋರಾಟ ಸಮಿತಿಯ ಅಣ್ಣಾ ಶೇರಿಪ್, ಸುರೇಶ್ ಗೋಪಿ, ಸ್ಫೂರ್ತಿ ಶೇರಿಪ್, ಅಶೋಕ್ ಶೇಟ್, ಸೌಕತ್ ಇತರರು ಇದ್ದರು.