ಮಡಿಕೇರಿ, ಅ. 15: ಕೊಡಗು ಜಿಲ್ಲೆಯಲ್ಲಿ ಹವಾಮಾನ ವೈಪರಿತ್ಯದ ನಡುವೆಯೂ ಪ್ರಸಕ್ತ ಸಾಲಿನ ಮುಂಗಾರು ಕೃಷಿಯಲ್ಲಿ ಶೇ. 80 ರಷ್ಟು ಸಾಧನೆ ಗೋಚರಿಸಿದೆ. ಮುಂಗಾರು ಮಳೆಯಾಶ್ರಿತ ಭತ್ತ ಕೃಷಿ ನಾಟಿಯಲ್ಲಿ 30500 ಹೆಕ್ಟೇರ್ ಗುರಿ ಹೊಂದಿದ್ದರೂ ಕೇವಲ (23861) ಹೆಕ್ಟೇರ್ ಸಾಧನೆ ಕಂಡು ಬಂದಿದೆ. ಇನ್ನು ಕೇವಲ ಸೋಮವಾರಪೇಟೆ ತಾಲೂಕು ವ್ಯಾಪ್ತಿಗೆ ಸೀಮಿತವಾಗಿ 4000 ಹೆಕ್ಟೇರ್ ಮುಸುಕಿನ ಜೋಳದ ಪೈಕಿ 3590 ಹೆಕ್ಟೇರ್ ಗುರಿ ಸಾಧ್ಯವಾಗಿದೆ. ಹೀಗಾಗಿ ಒಟ್ಟು 27451 ಹೆಕ್ಟೇರ್ ಕೃಷಿಯೊಂದಿಗೆ ಒಟ್ಟು 34500 ಹೆಕ್ಟೇರ್ ಪೈಕಿ ಶೇ. 80 ಸಾಧನೆಯಾಗಿದೆ.
ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ, ಶಿರಂಗಾಲ, ಮಣಚೂರು ತೊರೆನೂರು, ವ್ಯಾಪ್ತಿಯಲ್ಲಿ ಈಚೆಗೆ ಭತ್ತದ ನಾಟಿ ಕೃಷಿ ಕಂಡು ಬಂದಿದ್ದು, ಇದು ಇಳುವರಿ ನೀಡುವ ಸಂಭವ ಕಡಿಮೆ ಎಂದು ಕೃಷಿ ತಾಂತ್ರಿಕ ಅಧಿಕಾರಿ ರಮೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ಶೀತ ವಾತಾವರಣ ಭತ್ತ ನಾಟಿಗೆ ಪೂರಕವಿಲ್ಲವೆಂದು ತಿಳಿಸಿರುವ ಅವರು, ಬೆಳೆಗಾರರು ಕಾಳುಕಡ್ಡಿ ಬೆಳೆಯುವಂತೆ ಸಲಹೆ ನೀಡಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ಮುಂಗಾರುವಿನಲ್ಲಿ ಒಟ್ಟು 6500 ಹೆಕ್ಟೇರ್ ಗುರಿ ಹೊಂದಿದ್ದು, 4950 ಹೆಕ್ಟೇರ್ ಮಾತ್ರ ಪ್ರಗತಿ ಕಂಡು ಬಂದಿದೆ. ಸೋಮವಾರಪೇಟೆ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಭತ್ತ ಹಾಗೂ 4 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಗುರಿ ಹೊಂದಿದ್ದು, ಈ ಪೈಕಿ 7970 ಹೆಕ್ಟೇರ್ ಭತ್ತ ಮತ್ತು 3590 ಹೆಕ್ಟೇರ್ ಜೋಳ ಬೆಳೆಯ ಲಾಗುತ್ತಿದೆ. ಹೀಗಾಗಿ ತಾಲೂಕಿನಲ್ಲಿ ಒಟ್ಟು 11560 ಹೆಕ್ಟೇರ್ ಕೃಷಿ ಸಾಧನೆಯಾಗಿದೆ.
ಇನ್ನು ವೀರಾಜಪೇಟೆ ತಾಲೂಕಿನಲ್ಲಿ ಕೂಡ 14 ಸಾವಿರ ಹೆಕ್ಟೇರ್ ಭತ್ತದ ಕೃಷಿಯ ಗುರಿಯಿದ್ದು, ಇದುವರೆಗೆ 10941 ಹೆಕ್ಟೇರ್ ಕೃಷಿಯಲ್ಲಿ ಪ್ರಗತಿ ಗೋಚರಿಸಿದೆ. ಈ ಸಾಲಿನಲ್ಲಿ ವಿಶೇಷವಾಗಿ ಕೃಷಿ ಇಲಾಖೆಯಿಂದ ಕೇಂದ್ರ ಸರಕಾರದ ಪ್ರೋತ್ಸಾಹಕಾರಿ ಕೃಷಿ ಯೋಜನೆಗಳನ್ನು ರಾಜ್ಯ ಸರಕಾರದಿಂದ ಅನುಷ್ಠಾನಗೊಳಿಸಲು ರೈತರಿಗೆ ಕಲ್ಪಿಸಿದ್ದರೂ, ಹವಾಮಾನ ವ್ಯತ್ಯಾಸದಿಂದ ಹೆಚ್ಚಿನ ರೈತರು ಕೃಷಿಗೆ ಮುಂದಾಗಿಲ್ಲವೆಂದು ಗೊತ್ತಾಗಿದೆ. ಕೆಲವೆಡೆ ಸೀಮಿತವಾಗಿ ಆಧುನಿಕ ಕೃಷಿಯಂತ್ರದ ನಾಟಿಗೆ ಸ್ಪಂದನ ಲಭಿಸಿದೆ. ಹೀಗಾಗಿ ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯ ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಿರುವ ಭತ್ತದ ಗದ್ದೆಗಳು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿ ರುವದು ಕಂಡು ಬಂದಿದೆ.
ಪರಿಣಾಮ ಜಿಲ್ಲೆಯಲ್ಲಿ ಭತ್ತವನ್ನೇ ಅವಲಂಬಿಸಿದ ರೈತರು ಇತ್ತೀಚಿನ ವರ್ಷಗಳಲ್ಲಿ ಈ ಕೃಷಿಯಿಂದ ವಿಮುಖರಾಗಿ ವಿವಿಧ ಬೆಳೆಗಳನ್ನು ಕೃಷಿ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ತೋಟಗಾರಿಕಾ ಬೆಳೆಗಳಲ್ಲಿ ತೊಡಗಿದ್ದಾರೆ. ಪ್ರಸಕ್ತ ಸನ್ನಿವೇಶ ಗಮನಿಸಿದರೆ, ಭತ್ತದ ಗದ್ದೆಗಳು ವಿಪರೀತ ಶೀತದಿಂದ ಕೂಡಿದ್ದು, ಈಗಷ್ಟೇ ಕದಿರು ಕಟ್ಟುವ ಹಂತದಲ್ಲಿದೆ. ಸಾಮಾನ್ಯವಾಗಿ ಕಾವೇರಿ ಸಂಕ್ರಮಣ ವೇಳೆಗೆ ಭತ್ತದ ಗದ್ದೆಗಳಲ್ಲಿ ಕದಿರು ಕಾಣಿಸಿಕೊಳ್ಳುವದು ವಾಡಿಕೆ. ಕೆಲವೆಡೆ ಇನ್ನು ಕೂಡ ಹನಿಯುತ್ತಿರುವ ಮಳೆ ಹಾಗೂ ವಿಪರೀತ ಮಂಜು ಕವಿದ ವಾತಾವರಣ ಭತ್ತ ಇಳುವರಿಗೆ ಪ್ರತಿಕೂಲ ವಾತಾವರಣ ಸೃಷ್ಟಿಸುವ ಆತಂಕವಿದೆ.
ಮಳೆ ವಿವರ: ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ ಸರಾಸರಿ 87 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಸಮಯಕ್ಕೆ 68 ಇಂಚು ದಾಖಲಾಗಿತ್ತು. ಮಡಿಕೇರಿ ತಾಲೂಕಿನಲ್ಲಿ 137 ಇಂಚು ಮಳೆಯಾಗಿದ್ದರೆ, ಹಿಂದಿನ ವರ್ಷ ಈ ಅವಧಿಗೆ 107 ಇಂಚು ಮಾತ್ರ ದಾಖಲಾಗಿತ್ತು. ಮಡಿಕೇರಿ ತಾಲೂಕಿನ ಮುಟ್ಲು, ಹಮ್ಮಿಯಾಲ, ಸೂರ್ಲಬ್ಬಿ, ಗ್ರಾಮೀಣ ಪ್ರದೇಶ ಹಾಗೂ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಚೆಯ್ಯಂಡಾಣೆ ಸುತ್ತಮುತ್ತ ಪ್ರಸಕ್ತ ದಿನಗಳಲ್ಲಿ ಮಳೆ ಮುಂದುವರಿದಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಕೂಡ ಪುಷ್ಪಗಿರಿ ತಪ್ಪಲು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ತುಂತುರು ಮಳೆ ಮುಂದುವರಿದಿದೆ. ಈ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಸರಾಸರಿ 68 ಇಂಚು ಮಳೆಯಾದರೆ, ಕಳೆದ ವರ್ಷ ಈ ಅವಧಿಗೆ 52 ಇಂಚು ದಾಖಲಾಗಿತ್ತು. ವೀರಾಜಪೇಟೆ ತಾಲೂಕಿನ ಬಿರುನಾಣಿ ಸುತ್ತಮುತ್ತ ಅಧಿಕ ಮಳೆಯಾದರೆ, ಬಾಳೆಲೆ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಈ ಸಾಲಿನಲ್ಲಿ ಅಧಿಕ ಮಳೆಯಾಗಿದೆ. ಈ ತಾಲೂಕಿನಲ್ಲಿ ಪ್ರಸಕ್ತ ವರ್ಷಾರಂಭ ದಿಂದ ಇದುವರೆಗೆ ಸರಾಸರಿ 70 ಇಂಚು ಮಳೆಯಾಗಿದ್ದು, ಕಳೆದ ಸಾಲಿನಲ್ಲಿ 52 ಇಂಚು ಮಳೆ ದಾಖಲಾಗಿತ್ತು.
ಈ ವರ್ಷ ಮುಂಗಾರುವಿನಲ್ಲಿ ಉತ್ತಮ ಮಳೆಯಾಗಿರುವದಕ್ಕೆ ಪೂರಕವೆಂಬಂತೆ ತಲಕಾವೇರಿಯ ತೀರ್ಥ ಕುಂಡಿಕೆ ಹಾಗೂ ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ತುಲಾ ಸಂಕ್ರಮಣ ಸಂದರ್ಭ ನೀರಿನ ಅಭಾವ ಎದುರಾಗಿಲ್ಲ ಎನ್ನುವದು ವಿಶೇಷ. ಜಿಲ್ಲೆಯ ನದಿಪಾತ್ರಗಳಲ್ಲಿ ಕೂಡ ನೀರಿನ ಹರಿಯುವಿಕೆ ಈ ವೇಳೆ ಸರಾಗವಿರುವದು ಕಂಡು ಬಂದಿದೆ.
ಕರ್ನಾಟಕ ರಾಜಧಾನಿ ಸಹಿತ ವಿವಿಧೆಡೆ ವರುಣನ ರುದ್ರನರ್ತನದಿಂದ ಜೀವಸಂಕುಲ ಬವಣೆ ಪಡುತ್ತಿದ್ದರೆ, ಕಾವೇರಿ ನಾಡಿನಲ್ಲಿ ಒಂದು ರೀತಿಯ ನೆಮ್ಮದಿ ಕಾಣುವಂತಾಗಿದೆ. ಈಗಿನ ಹವಾಮಾನದಿಂದ ಕಾಫಿ ಹಾಗೂ ಕರಿಮೆಣಸು ಫಸಲಿಗೆ ಅಲ್ಲಲ್ಲಿ ಸಮಸ್ಯೆ ಎದುರಾಗಿರುವ ಬಗ್ಗೆ ಬೆಳೆಗಾರರು ಆತಂಕ ತೋಡಿಕೊಂಡಿದ್ದಾರೆ. ಹೀಗಿದ್ದರೂ ಪ್ರಸಕ್ತ ಹವಾಮಾನ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ನೀಗಿಸುವ ವಿಶ್ವಾಸ ಅನುಭವಿಗಳದ್ದಾಗಿದೆ.