ಕುಶಾಲನಗರ, ಅ. 19: ಜೀವನದಿ ಕಾವೇರಿಯ ಸಂರಕ್ಷಣೆ, ಪಾವಿತ್ರ್ಯತೆಯನ್ನು ಕಾಪಾಡಲು ಪ್ರತಿಯೊಬ್ಬರೂ ಮುಂದಾಗಬೇಕಾಗಿದೆ ಎಂದು ಚಲನಚಿತ್ರ ನಟ ಸೃಜನ್ ಲೋಕೇಶ್ ಹೇಳಿದರು.
ಕುಶಾಲನಗರದ ಬಾರವಿ ಕನ್ನಡ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ಕಾವೇರಿ ತುಲಾ ಸಂಕ್ರಮಣದ ಅಂಗವಾಗಿ ಕೊಪ್ಪ ಬಳಿ ಹಮ್ಮಿಕೊಂಡಿದ್ದ ಕಾವೇರಿ ತೀರ್ಥ ವಿತರಣೆ ಹಾಗೂ ಕಾವೇರಿ ನದಿಗೆ ಬಾಗಿನ ಸಮರ್ಪಣೆಯ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದ ಜೀವನದಿಯಾದ ಕಾವೇರಿಯ ಉಳಿವಿಗಾಗಿ ಬೇದಭಾವ ತೊರೆದು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ನಂತರ ಮಾಜಿ ಸಂಸದ ಸಿ.ಹೆಚ್.ವಿಜಯ್‍ಶಂಕರ್ ಮಾತನಾಡಿ, ಬಾರವಿ ಸಹೋದರರು ಕಾವೇರಿ ನದಿ ತಟದಲ್ಲಿ ಕಾವೇರಿ ಪ್ರತಿಮೆ ನಿರ್ಮಿಸುವ ಮೂಲಕ ಕಾವೇರಿ ಮಾತೆಯ ಬಗ್ಗೆ ಜನರಿಗೆ ಭಕ್ತಿಯ ಅರಿವು ಮೂಡಿಸಲು ಪ್ರಯತ್ನಿಸುತ್ತಿರುವದು ಹೆಮ್ಮೆಯ ವಿಚಾರ ಎಂದರು.
ಚಲನಚಿತ್ರ ಹಾಸ್ಯನಟ ತರಂಗ ವಿಶ್ವ ಮಾತನಾಡಿ, ರಾಜ್ಯದಲ್ಲಿ ಪ್ರತಿಯೊಬ್ಬರೂ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕಿದೆ. ಪಾಶ್ಚಿಮಾತ್ಯ ಭಾಷೆಗೆ ಮಾರು ಹೋಗಿರುವ ಜನರು ಕನ್ನಡ ಮಾತನಾಡಲು ಸಂಕೋಚ ಹಾಗೂ ನಾಚಿಕೆ ಮನೋಭಾವ ತೋರುತ್ತಿರುವದು ವಿಷಾದನೀಯ ಎಂದರು.
ಇದೇ ಸಂದರ್ಭ ಚಿತ್ರನಟ ಸೃಜನ್‍ಲೋಕೇಶ್‍ಗೆ ‘ಕಾವೇರಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾವೇರಿ ತೀರ್ಥ ಪೂಜೆ ನಂತರ ಸಾರ್ವಜನಿಕರಿಗೆ ತೀರ್ಥ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಬಾರವಿ ಕನ್ನಡ ಸಂಘದ ಸಂಸ್ಥಾಪಕರಾದ ಬಬಿಂೀದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಮತ್ತಿತರರು ಹಾಜರಿದ್ದರು.