ಕುಶಾಲನಗರ, ಅ. 19: ನಾಪೋಕ್ಲು ಮತ್ತು ಮೂರ್ನಾಡು ಪೊಲೀಸ್ ಠಾಣಾ ವ್ಯಾಪ್ತಿಗೊಳ ಪಡುವ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುವದ ರೊಂದಿಗೆ ನದಿ ಒಡಲು ಬರಿದು ಮಾಡುತ್ತಿರುವ ದಂಧೆ ಅಧಿಕ ಗೊಂಡಿದ್ದು ರಾತ್ರೋರಾತ್ರಿ ಎಗ್ಗಿಲ್ಲದೆ ಮರಳು ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಬಲಮುರಿ ವ್ಯಾಪ್ತಿಯ ಕಾವೇರಿ ನದಿಯ ಬದಿಯಲ್ಲಿ ತೆಪ್ಪ ಬಳಸಿ ನದಿಯಿಂದ ಮರಳು ಎತ್ತಲಾಗುತ್ತಿದ್ದು ರಾತ್ರಿ ವೇಳೆ ಸಾಗಾಟವಾಗುತ್ತಿದೆ.
ನದಿ ಬದಿಯಿಂದ ಯಂತ್ರ ಬಳಸಿ ಮಣ್ಣು ಬಗೆದು ನದಿಗೆ ಹಾಕುವದು ನಂತರ ಫಿಲ್ಟರ್ ಮರಳನ್ನು ಸಂಗ್ರಹಿಸಿ ಟ್ರಾಕ್ಟರ್, ಟಿಪ್ಪರ್ಗಳಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಹಲವು ಬಾರಿ ದೂರಿದರೂ ಪ್ರಯೋಜವಾಗಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ನದಿ ತಟದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣದೊಂದಿಗೆ ಸಂಗ್ರಹಿಸಿದ ಮರಳು ಲಾರಿಯೊಂದಕ್ಕೆ 40 ರಿಂದ 50 ಸಾವಿರ ರೂಪಾಯಿ ಮೌಲ್ಯಕ್ಕೆ ಮಾರಾಟ ಮಾಡುತ್ತಿದ್ದು ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮೌನವಹಿಸಿರುವದು ಶಂಕೆಗೆ ಎಡೆಮಾಡಿದೆ. ಈ ವ್ಯಾಪ್ತಿಯಿಂದ ಜಿಲ್ಲೆಯ ವಿವಿಧ ಭಾಗಗಳಿಗೆ ಸೇರಿದಂತೆ ನೆರೆಯ ಜಿಲ್ಲೆಗಳಿಗೆ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ.
ನದಿಯಲ್ಲಿ 25 ಅಡಿ ಆಳದ ತನಕ ದಿನನಿತ್ಯ 50 ಕ್ಕೂ ಅಧಿಕ ಕಾರ್ಮಿಕರು ಮರಳು ಸಂಗ್ರಹಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ದಂಧೆ ಹೆಸರಿನಲ್ಲಿ ವ್ಯಕ್ತಿಯೊಬ್ಬನ ಹತ್ಯೆಯಾಗಿದ್ದು ಈ ವ್ಯಾಪ್ತಿಯಲ್ಲಿ ಭಯಭೀತ ವಾತಾವರಣ ಕೂಡ ಸೃಷ್ಟಿಯಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ. ಬಲಮುರಿ ಮಹದೇವ ದೇವಸ್ಥಾನ ಹಾಗೂ ಅಯ್ಯಪ್ಪ ದೇವಾಲಯ ವ್ಯಾಪ್ತಿಯಲ್ಲಿ ದಿನ ರಾತ್ರಿ ಎನ್ನದೆ ಈ ದಂಧೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.
ಕೂಡಲೆ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲಿಸಿ ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಒತ್ತಾಯಿಸಿದ್ದಾರೆ.