ಮಡಿಕೇರಿ, ಅ. 19: ಮಹಿಳೆಯೊಬ್ಬಳನ್ನು ತನ್ನೊಂದಿಗೆ ಮೂರು ತಿಂಗಳು ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ, ಬಳಿಕ ಆಕೆಯನ್ನು ನಿಗೂಢವಾಗಿ ಕೊಲೆಗೈದು ಹೂತು ಹಾಕಿದ್ದ ಪ್ರಕರಣ ಸಂಬಂಧ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ತಾ. 17.9.2014 ರಂದು ಪೊನ್ನಂಪೇಟೆ ಠಾಣೆಯ ಗುಪ್ತ ಕರ್ತವ್ಯದ ಸಿಬ್ಬಂದಿ ರಮೇಶ್ ಕರ್ತವ್ಯದ ಮೇರೆ ಬೇಗೂರು ಗ್ರಾಮಕ್ಕೆ ಹೋದ ಸಮಯದಲ್ಲಿ, ಗ್ರಾಮದ ಬಾಳಂಗಾಡುವಿನಲ್ಲಿ ಜೇನುಕುರುಬರ ರಾಜು ಎಂಬಾತನ ಮನೆಯಿಂದ ಸುಮಾರು 25 ಮೀಟರ್ ದೂರದಲ್ಲಿ ಬಿದಿರಿನ ಕುರುಚಲು ಕಾಡಿನ ಮಧ್ಯದಲ್ಲಿ ದುರ್ವಾಸನೆ ಬರುತ್ತಿದ್ದು, ಕೆಂಪು ಬಣ್ಣದ ಸೀರೆ ಬಿದ್ದಿದ್ದು, ಯಾರೂ ಸತ್ತಾಕೆಯ ತಲೆ ಭಾಗ ಮತ್ತು ಕಾಲುಗಳು ಹೊರಕ್ಕೆ ಗೋಚರಿಸಿದೆ. ಮೃತ ದೇಹದ ಭಾಗಗಳನ್ನು ಯಾವದೋ ವನ್ಯಜೀವಿ ತಿಂದಿರು ವದು ಕಂಡು ಬಂದಿದೆ. ಆರೋಪಿ ಜೇನುಕುರುಬರ ರಾಜು ಕುಶಾಲ ನಗರದ ಕಮಲ ಎಂಬಾಕೆಯನ್ನು 3 ತಿಂಗಳ ಹಿಂದೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದು, ತಾ. 3.9.2014 ರಂದು ರಾತ್ರಿ ಸಮಯದಲ್ಲಿ ಕೊಲೆ ಮಾಡಿ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ತನ್ನ ಮನೆಯ ಮುಂಭಾಗದ ಬಿದಿರಿನ ಮಧ್ಯೆ ಗುಂಡಿ ತೆಗೆದು ಮುಚ್ಚಿ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾನೆ. ಆರೋಪಿ ರಾಜು ಕೊಲೆ ಮಾಡಿ ಮೃತದೇಹವನ್ನು ಮರೆ ಮಾಚಲು ಪ್ರಯತ್ನಿಸಿರು ವದರಿಂದ ಆರೋಪಿ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳ ಬೇಕೆಂದು ಪೊನ್ನಂಪೇಟೆ ಠಾಣಾ ಮಾ. ಸಂ. 131/2014 ಕಲಂ 302, 201 ಐಪಿಸಿ ರೀತಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ. ರಾಜು ತನಿಖೆ ಪೂರೈಸಿ ಆರೋಪಿ ರಾಜು (58) ವಿರುದ್ಧ ತಾ. 12.11.2014 ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದು ಆರೋಪಿಯ ವಿರುದ್ಧ ಆರೋಪವು ಸಾಬೀತಾದ ಕಾರಣ ನ್ಯಾಯಾಧೀಶ ಮೋಹನ್‍ಪ್ರಭು ಅವರು ತಾ. 13 ರಂದು ಆರೋಪಿಗೆ ಕಲಂ 302 ಐಪಿಸಿಗೆ ಸಂಬಂಧಿಸಿ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. 5,000 ಗಳ ದಂಡ, ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳು ಸಾದಾ ಕಾರಾಗೃಹ ವಾಸ, ಕಲಂ 201 ಐಪಿಸಿಗೆ ಸಂಬಂಧಿಸಿದಂತೆ 4 ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ ರೂ. 2,000 ದಂಡ, ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳು ಕಾರಾಗೃಹವಾಸ ಶಿಕ್ಷೆ ವಿಧಿಸಿದ್ದು, ಕಲಂ 377 ಐಪಿಸಿಗೆ ಸಂಬಂಧಿಸಿದಂತೆ 7 ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ ರೂ. 4,000 ದಂಡ, ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳು ಕಾರಾಗೃಹವಾಸ ಶಿಕ್ಷೆ ವಿಧಿಸಿದ್ದು, ಮೇಲ್ಕಂಡ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತದೆ ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗರಾಜ್ ಆಚಾರ್ ಮತ್ತು ಅಜಿತ್ ಕುಮಾರ್ ವಾದ ಮಂಡಿಸಿದ್ದರು.