ಮಡಿಕೇರಿ, ಅ. 20: ಇಲ್ಲಿನ ಐತಿಹಾಸಿಕ ಕೋಟೆಯ ಆವರಣದಲ್ಲಿ ಇರುವ ನ್ಯಾಯಾಲಯ ಕಟ್ಟಡ ತೆರವಿಗೆ ಪ್ರಾಚ್ಯವಸ್ತು ಇಲಾಖೆ ಬೇದಿಕೆ ಇಟ್ಟಿರುವ ಬೆನ್ನಲ್ಲೇ ಕರ್ನಾಟಕ ನ್ಯಾಯಾಂಗ ಆಡಳಿತದಿಂದ ಸುಸಜ್ಜಿತವಾಗಿ ನೂತನ ನ್ಯಾಯಾಲಯ ಸಂಕೀರ್ಣ ತಲೆಯೆತ್ತತೊಡಗಿದೆ. ಮಡಿಕೇರಿಯ ಗಾಲ್ಫ್ ಬಳಿ ಹೌಸಿಂಗ್ ಬೋರ್ಡ್ ಕಾಲೋನಿಗೆ ಹೊಂದಿಕೊಂಡಂತೆ ಈ ನ್ಯಾಯದೇಗುಲ ನಿರ್ಮಾಣ ಗೊಳ್ಳುತ್ತಿದೆ.ವಿಶಾಲ ಐದು ಎಕರೆ ವಿಸ್ತೀರ್ಣದ ಸುಂದರ ಪರಿಸರದಲ್ಲಿ ಈಗಾಗಲೇ ಕಟ್ಟಡ ಕಾಮಗಾರಿ ನಡೆದಿದ್ದು, ಆಧುನಿಕ ತಂತ್ರಜ್ಞಾನ ದಿಂದ ಶತಮಾನಗಳ ಕಾಲ ಕಾರ್ಯ ನಿರ್ವಹಿಸುವ ಆಶಯದೊಂದಿಗೆ ಬೆಂಗಳೂರಿನ ಕೆ.ಬಾಬುರಾಜ್ ಕನ್ಸ್ಟ್ರಕ್ಷನ್ ಉದ್ದಿಮೆಯು ನ್ಯಾಯಾಲಯ ಕಟ್ಟಡ ನಿರ್ಮಾಣದಲ್ಲಿ ತೊಡಗಿದೆ. ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಅಂದಾಜು ರೂ. 10 ಕೋಟಿ ಯೋಜನೆಯೊಂದಿಗೆ ಮೊದಲ ಹಂತದ ಕೆಲಸ ಸಾಗಿದ್ದು, ಈ ಕಟ್ಟಡವು ಭವಿಷ್ಯದಲ್ಲಿ ಮೂರು ಅಂತಸ್ತುಗಳೊಂದಿಗೆ ಕಾರ್ಯ ನಿರ್ವಹಿಸಲ್ಪಡುವ ರೀತಿಯಲ್ಲಿ ರೂಪುಗೊಳ್ಳತೊಡಗಿದೆ.
ದೈನಂದಿನ ಕಲಾಪಗಳನ್ನು ನಡೆಸಲು ಅನುಕೂಲವಾಗುವಂತೆ ಮತ್ತು ಅಪರಾಧಿಗಳ ಸಹಿತ ನ್ಯಾಯ ಕೋರಿ ಬರುವವರಿಗೆ ಮೂಲಭೂತ ಸೌಕರ್ಯಗಳಿಗೆ ಅಡಚಣೆ ಆಗದ ರೀತಿಯಲ್ಲಿ ನೂತನ ನ್ಯಾಯಾಲಯ ಸಂಕೀರ್ಣದ ಯೋಜನೆ ರೂಪು ಗೊಂಡಿರುವದು ಗೋಚರಿಸಲಿದೆ. ‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ ನೂತನ ನ್ಯಾಯಾಲಯ ಕಟ್ಟಡದ ಮೂರು ಅಂತಸ್ತುಗಳ ಪೈಕಿ ಪ್ರತಿ ಅಂತಸ್ತಿನಲ್ಲಿ ತಲಾ ಮೂರು ವಿಶಾಲ ನ್ಯಾಯಾಂಗ ಕಲಾಪ ನಡೆಯುವ ಸಭಾಂಗಣಗಳು ರೂಪುಗೊಳ್ಳುತ್ತಿವೆ.
ಇನ್ನೊಂದೆಡೆ ಕೊಡಗಿನ ಮಳೆಗಾಲ, ಗುಡುಗು - ಸಿಡಿಲು ಇತ್ಯಾದಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ದಿಸೆಯಲ್ಲಿ ಕಟ್ಟಡ ಕಾಮಗಾರಿಗೆ ಯೋಜನೆಯೊಂದಿಗೆ, ಅಂತಹ ಸನ್ನಿವೇಶದಿಂದ ನ್ಯಾಯಾಲಯ ಸಂಕೀರ್ಣಕ್ಕೆ ಹಾನಿ ಯಾಗದಂತೆ ತಾಮ್ರದ ತೆಳು ಹೊದಿಕೆಗಳನ್ನು ಅಲ್ಲಲ್ಲಿ ಕಾಮಗಾರಿ ಹಂತದಲ್ಲೇ ಜೋಡಣೆ ಮಾಡಲಾಗುತ್ತಿದೆ.
ಅಲ್ಲದೆ ವಿಶಾಲ ನ್ಯಾಯಾಂಗ ಕಲಾಪ ಸಭಾಂಗಣಕ್ಕೆ ಪ್ರತಿ ಯೊಂದರಲ್ಲಿಯೂ ನ್ಯಾಯಾಧೀಶರ ಕೊಠಡಿ, ಸಿಬ್ಬಂದಿಗೆ ಕೊಠಡಿ ಹಾಗೂ ಆಯಾ ದಿನಗಳಲ್ಲಿ ವಿಚಾರಣೆಗೆ ಕರೆತರಲಾಗುವ ಕಾರಾಗೃಹ ಬಂದಿಗಳು, ಇತರ ಆರೋಪಿಗಳಿಗೆ ಭದ್ರತಾ ಸಿಬ್ಬಂದಿ ವಶದಲ್ಲಿ ಇರಿಸಲು ಶೌಚಾಲಯ ಸಹಿತ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ರೀತಿ ನ್ಯಾಯಾಂಗ ಕಲಾಪ ನಡೆಯಲಿರುವ ಎಲ್ಲಾ ಒಂಭತ್ತು ಸಭಾಂಗಣ ಗಳಲ್ಲಿಯೂ ಪ್ರತ್ಯೇಕವಾಗಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿರುವದು ಕಂಡು ಬರುತ್ತಿದೆ. ಅತ್ಯಂತ ಸುಸಜ್ಜಿತ ರೀತಿ ಹಾಗೂ ಗುಣಮಟ್ಟದ ಕೆಲಸ ನಡೆಯುತ್ತಿದ್ದು, ಗಾಳಿ, ಬೆಳಕಿನೊಂದಿಗೆ ಮಳೆಯಿಂದ ಅಡಚಣೆಯಾಗದಂತೆ ಕಾಮಗಾರಿ ಹಂತದಲ್ಲೇ ಯೋಜನೆ ರೂಪಿಸಲಾಗಿದೆ. ಅಂದಾಜು 33 ಸಾವಿರ ಚದರಡಿ ವಿಸ್ತೀರ್ಣದ ನೆಲ ಅಂತಸ್ತು ಕೆಲಸ ಮುಕ್ತಾಯಗೊಳ್ಳುವ ದರೊಂದಿಗೆ, ಈ ಸಂಕೀರ್ಣದಲ್ಲಿ ನ್ಯಾಯಾಲಯದ ಕೆಲಸ ಕಾರ್ಯಗಳಿಗೆ ಬಂದು ಹೋಗುವವರ ಅನುಕೂಲಕ್ಕಾಗಿ 3 ಕಡೆಗಳಲ್ಲಿ ‘ಲಿಫ್ಟ್’ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ನೂತನ ನ್ಯಾಯಾಲಯ ಪ್ರವೇಶದ್ವಾರ ಅತ್ಯಂತ ಆಕರ್ಷಣೆಯೊಂದಿಗೆ ಸುಮಾರು 30 ಅಡಿಗಳಷ್ಟು ಎತ್ತರದಿಂದ ಕೂಡಿದೆ. ಈ ನ್ಯಾಯಾಲಯ ಕಟ್ಟಡ ಕಾಮಗಾರಿಯನ್ನು ಬಾಹ್ಯಾಕರ್ಷಣೆ ಯಿಂದಲೂ ರೂಪಿಸುತ್ತಿರುವದು ಇದರ ವಿಶೇಷ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ರೂಪು ಗೊಳ್ಳುತ್ತಿರುವ ನ್ಯಾಯಾಲಯಗಳ ಮಾದರಿಯಲ್ಲೇ ಭವಿಷ್ಯದ ಮಡಿಕೇರಿ ನ್ಯಾಯಾಲಯ ತಲೆಯೆತ್ತುತ್ತಿದೆ.
ಇದರೊಂದಿಗೆ ಭದ್ರತಾ ಕೊಠಡಿ, ಊಟ, ಉಪಹಾರ ಗೃಹ ಇನ್ನಿತರ ಸೌಕರ್ಯಗಳನ್ನು ಇಲ್ಲಿ ಗಮನದಲ್ಲಿ ಇರಿಸಿಕೊಂಡು ಕಾಮಗಾರಿ ನಿರ್ವಹಿಸಲ್ಪಡುತ್ತಿದೆ. ಮುಂದಿನ ಸಾಲಿನ ಜೂನ್ ತಿಂಗಳ ವೇಳೆಗೆ ನೂತನ ಕಟ್ಟಡ ಕೆಲಸ ಪೂರೈಸಿ ಸಂಬಂಧಪಟ್ಟವರಿಗೆ ವಹಿಸಿಕೊಡುವ ದಿಸೆಯಲ್ಲಿ ಗುತ್ತಿಗೆ ಸಂಸ್ಥೆ ಕಾಯಕನಿರತವಾಗಿರುವದು ‘ಶಕ್ತಿ’ ಭೇಟಿ ವೇಳೆ ಗೋಚರಿಸಿತು.